Thursday 21 March 2013

ರೋಗದ ಮೇಲೆ ಪ್ರಯೋಗ..!

ಸಿನಿಮಾ ಕೇವಲ ಮನೋರಂಜನೆಗಾಗಿ ಅನ್ನೋ ಕಾಲವಿತ್ತು. ಆದರೆ ಈಗ ಆ ಜಮಾನಾ ಕಳೆದು ಮಾಹಿತಿ,ಶಿಕ್ಷಣ,ಮನೋರಂಜನೆ ಎಂಬ ಘೋಷ ವಾಕ್ಯದೊಂದಿಗೆ ಜನರಿಗೆ ಹೊಸತನ್ನು ನೀಡುವತ್ತ ಸಿನಿಮಾ ದಾಪುಗಾಲಿಡುತ್ತಿದೆ. ಜಾಗತಿಕ ಬಿಸಿ ಸಿನಿಮಾವನ್ನೂ ಬಿಡದೆ ಮಾಹಿತಿ ಕ್ರಾಂತಿಯ ಹೊಳೆಯನ್ನೇ ಹರಿಸಿದೆ. ಜನರಿಗೆ ಬೇಕಾದ ಮಾಹಿತಿ,ಮನೋರಂಜನೆಯೊಂದಿಗೆ ಹೊಸತನವನ್ನು ನೀಡುವತ್ತ ಸಿನಿಮಾ ಮಂದಿ ಚಿಂತನೆ ಹಚ್ಚುತ್ತಿದ್ದಾರೆ. ಹೀಗಾಗಿಯೇ ಈ ಕ್ಷೇತ್ರದಲ್ಲಿ ಅನ್ವೇಶಣೆಗಳು, ಕ್ರಿಯಾಶೀಲತೆಗಳು ಹೆಚ್ಚುತ್ತಿರುವುದು. ಸಿನಿಮ್ಯಾಟೋಗ್ರಾಫಿ, ಸಂಭಾಷಣೆ, ಪ್ರಸ್ತುತತೆ ಎಲ್ಲದರಲ್ಲಿ ಹೊಸತನ್ನು ಕಾಣುತ್ತಿರುವ ನಾವು ಓದಿನಲ್ಲಿ ಸಿಗುವಂತಹ ಮಾಹಿತಿಯನ್ನ, ವಿಮರ್ಶಾತ್ಮಕ ಗುಣವನ್ನು ಇದರಿಂದ ಪಡೆಯಬಹುದು. ಸಿನಿಮಾ ತನ್ನ ಪ್ರಸ್ತುತತೆ ಮಾತ್ರವಲ್ಲದೆ ಸಿನಿಮಾದ ಕಥಾ ವಸ್ತುವಿನಲ್ಲೂ ನಾವು ಹೊಸತನವನ್ನು ಕಾಣಬಹುದು. ಸುಶಿಕ್ಷಿತ ಜನ ಈ ಸಿನಿಮಾವನ್ನು ಮನೋರಂಜನೆಯ ವಸ್ತುವಾಗಿ ನೋಡದೆ ಮಾಹಿತಿಯ ಆಗರವಾಗಿ ಕಾಣ ಬಯಸುತ್ತಿರುವುದು ಬದಲಾದ ವಿದ್ಯಮಾನ. ಇದನ್ನು ಅರ್ಥ ಮಾಡಿಕೊಂಡ ಸಿನಿಮಾ ರಂಗದ ಕೆಲವು ಕ್ರಿಯಾಶೀಲ ಮಂದಿ ಜನರಿಗೆ ಮಾಹಿತಿಪೂರ್ಣ ಕಥಾವಸುವನ್ನು ನೀಡುವತ್ತ ಗಮನಹರಿಸುತ್ತಿರುವುದನ್ನು ಕಾಣಬಹುದು. ಇದರ ಫಲವಾಗಿಯೇ ತಾರೇ ಝಮೀನ್ ಪರ್,ಪಾ,ಬ್ಲಾಕ್‌ನಂತಹ ಸಿನಿಮಾಗಳು ಹೊರ ಜಗತ್ತಿಗೆ ಪರಿಚಯಿಸಲ್ಪಟ್ಟಿರುವುದು. ಇಂದು ಒಬ್ಬ ಮಾನಸಿಕ ವ್ಯಕ್ತಿಯನ್ನು ಪ್ರೀತಿ ವಿಶ್ವಾಸದಿಂದ ಗೆಲ್ಲಬಹುದೆಂಬ ವಿಷಯ ಪ್ರತಿಯೊಬ್ಬ ಸಾಮಾನ್ಯನಿಗೆ ತಿಳಿದಿರಬೇಕಾದರೆ ಅದಕ್ಕೆ ಕಾರಣ ಸಿನಿಮಾ..ಒಬ್ಬ ಬುದ್ದಿಮಾಂದ್ಯ ವ್ಯಕ್ತಿಯ ಮನದೊಳಗೂ ಪ್ರೀತಿಯ ಚಿಗುರು ಮೂಡಬಹುದೆಂಬ ಕಲ್ಪನೆ ಮೂಡಿದ್ದು ಬರ್ಫಿ ಸಿನಿಮಾದ ಪ್ರಿಯಾಂಕಾಳನ್ನು ನೋಡಿದಾಗಲೆ. ಸಿನಿಮಾ ಜಗತ್ತಿನಲ್ಲಿ ಸ್ಕ್ರಿಜೋಫ್ರೀನಿಯಾ,ಕ್ಲಿನಿಕಲ್ ಡಿಸೀಸ್, ಕ್ಯಾನ್ಸರ್ ಈಡಿಯೋ ಕಾಪ್ಲೆಕ್ಸ್,ಬ್ರೈನ್ ಟ್ಯೂಮರ್ ಹೀಗೆ ಆರೋಗ್ಯ ರಕ್ಷಣೆ ಹಾಗೂ ರೋಗಗಳ ಬಗ್ಗೆ ಅನೇಕ ಚಿತ್ರಗಳು ತೆರೆ ಕಂಡಿವೆ. ಕನ್ನಡದ ಮಹೇಶ್ವರ ದಿಂದ ಹಿಡಿದು ಇತ್ತೀಚಿನ ಪಾ ಚಿತ್ರದವರೆಗೆ ಸಿನಿಮಾ ಕ್ಷೇತ್ರದಲ್ಲಿ ಮಾಹಿತಿ ಕ್ರಾಂತಿಯೇ ನಡೆದಿದೆ. ಚೀನೀ ಕುಮ್‌ನಲ್ಲಿರುವ ರೋಗಿ ಮಗುವಿನೊಳಗಿನ ಆಸೆಗಳು,ಬೆಳದಿಂಗಳ ಬಾಲೆ, ಗೀತಾ ಸಿನಿಮಾದ ನಾಯಕಿಯರ ಪ್ರೀತಿಗಳು, ಶರಪಂಜರದ ಹುಚ್ಚಿಯ ಮನದ ನೋವು ಪ್ರೇಕ್ಷಕರ ಮನ ಮುಟ್ಟಿದ್ದು ಸಿನಿಮಾರಂಗದ ಮನಃಪಟಲದಿಂದ ಇನ್ನೂ ದೂರವಾಗದೇ ಇರುವುದಕ್ಕೆ ಸಾಕ್ಷಿ ಮತ್ತೆ ತೆರೆ ಕಂಡ ಆಡಂ, ಬರ್ಫಿಯಂತಹ ಮುಗ್ದ ಪ್ರೀತಿಯ ಸಿನಿಮಾಗಳು. ರೋಗಗಳ ಬಗ್ಗೆ ಸಿನಿಮಾ ಬರುತ್ತಿರುವುದು ಹೊಸದೇನಲ್ಲ. ೧೯೪೦ರ ದಶಕಗಳಿಂದಲೇ ರೋಗವನ್ನು ಕಥಾವಸ್ತುವಾಗಿ ಹೊದಿರುವ ಅನೇಕ ಸಿನಿಮಾಗಳು ಬಂದಿವೆ. ಪ್ರಧಾನ ವಸ್ತುವಾಗಿ ಕಾಣಿಸದೇ ಹೋದರೂ ಪ್ರಭಾವೀ ವಸ್ತುವಾಗಿಸುತ್ತದೆ. ಯಾವುದೋ ವಾಸಿಯಾಗದ ರೋಗದಿಂದ ಬಳಲುತ್ತಿರುವ ಕಥಾನಾಯಕಿ ಅಥವಾ ನಾಯಕ ಜೀವನವನ್ನು ಧನಾತ್ಮಕ ಚಿಂತನೆಗಳಿಂದ ಎದುರಿಸುವ ನಿರ್ದಾರ ಕೈಗೊಳ್ಳುವಂತಹ ಅನೇಕ ಸಿನಿಮಾಗಳು ಬಂದಿವೆ.ಕಥಾ ನಾಯಕನ ಹುಚ್ಚು ಬಿಡಿಸುವ ಡಾಕ್ಟರ್ ತನ್ನ ಪ್ರೀತಿ ವಿಶ್ವಾಸದ ಮೂಲಕ ಆತನನ್ನು ಕಾಪಾಡುವ ಕಥೆ ಅಥವಾ ರೋಗಕ್ಕೆ ಬಲಿಯಾಗಿ ತನ್ನ ಪ್ರೀತಿಯನ್ನು ತ್ಯಾಗ ಮಾಡುವ ನಾಯಕಿ ನಾಯಕರ ಸಿನಿಮಾಗಳು ಇಂದಿಗೂ ಜಗತ್ಪ್ರಸಿದ್ಧ. ಈ ಸಂದರ್ಭದಲ್ಲಿ ಅಕಿರಾ ಕುರಸೋವಾರವರ ಇಕಿರು ಸಿನಿಮಾ ನೆನಪಾಗುತ್ತದೆ. ಪ್ರತಿಯೊಬ್ಬ ವ್ಯಕ್ತಿಯೂ ನೋಡಬೇಕಾದ ಈ ಸಿನಿಮಾ ಜೀವನದ ನಿಜವಾದ ಅರ್ಥವನ್ನೊಳಗೊಂಡಿದ್ದು ಬದುಕಿನೊಂದಿಗೆ ಪ್ರೀತಿ ಮೂಡಿಸುವ ಕಾರ್ಯ ಕೈಗೊಂಡಿದೆ. ಈ ಸಿನಿಮಾದಲ್ಲಿ ಕ್ಯಾನ್ಸರ್ ರೋಗದಿಂದ ಬಳಲುವ ನಾಯಕ ಜೀವನವನ್ನು ಸವಾಲಾಗಿ ಸ್ವೀಕರಿಸುವುದೇ ಸಿನಿಮಾದ ಕಥಾವಸ್ತು. ಅಧಿಕಾರೀ ಶಾಹೀ ಮನೋಭಾವದ ವ್ಯಕ್ತಿಯೊಬ್ಬನ ಬದುಕಿನಲ್ಲಿ ಈಡೇರದ ಆಸೆ ತಲ್ಲಣಗಳು ಹತಾಶೆಗಳ ಚಿತ್ರಣವೇ ಈ ಸಿನಿಮಾ. ಸಿನಿಮಾದ ಮೊದಲಾರ್ಧದಲ್ಲಿ ನಾಯಕನಿಗೆ ಕ್ಯಾನ್ಸರ್ ಎಂದು ತಿಳಿಯುತ್ತದೆ. ಅಲ್ಲಿಂದ ಮುಂದೆ ಆತನ ಜೀವಿತ ಅವಧಿ ಕೇವಲ ಆರು ತಿಂಗಳು. ನಿರ್ದೇಶಕ ಈ ಚಿತ್ರವನ್ನು ೨ ಭಾಗವಾಗಿ ವಿಂಗಡಿಸಿದ್ದಾರೆ. ಮೊದಲಾರ್ಧದಲ್ಲಿ ಏಕಾಂಗಿಯಾಗಿ ಸಾಯುವ ನಾಯಕನ ಭಯದ ಚಿತ್ರಣವಿದೆ. ಉಳಿದ ಆರು ತಿಂಗಳುಗಳ ಜೀವಿತಾವಧಿಯ ಕಾಲದಲ್ಲಿ ವ್ಯಕ್ತಿಯೊಬ್ಬ ಏನೆಲ್ಲಾ ಸಾಧಿಸಬಹುದು ಎಂಬುದು ದ್ವಿತೀಯಾರ್ಧದ ಕಥೆ. ಮೊದಲಾರ್ಧ ದೇಹವಾದರೆ ದ್ವಿತೀಯಾರ್ದ ಆತ್ಮ. ೧೪೩ ಸುಧೀರ್ಘ ನಿಮಿಷಗಳ ಈ ಸಿನಿಮಾದಲ್ಲಿ ರೋಗವನ್ನು ಜಯಿಸುವ ಮನೋಧೈರ್ಯವನ್ನು ಚಿತ್ರಿಸಲಾಗಿದೆ. ಅಕಿರಾ ಕುರುಸೋವಾನ ಇಂತಹ ಸಿನಿಮಾಗಳು ಚಿತ್ರಾಭಿಮಾನಿಗಳ ಮನದಿಂದ ಇನ್ನೂ ಮಾಸಿಲ್ಲ. ನಂತರದ ದಿನಗಳಲ್ಲಿ ಬಂದಂತಹ ಮಹೇಶ್ವರ, ಅನ್ನಿಯನ್,ಮನಿಚಿತ್ರತ್ತಾಳ್,ತನ್ಮಾತ್ರಂ, ಎಕ್ ಹಸೀನಾ ಥೀ,ಗೀತಾ ಅನೇಕ ಸಿನಿಮಾಗಳು ರೋಗಿಗಳ ಬಗೆಗೆ ಮೂಡಿಬಂದಿವೆ. ಈ ಸಿನಿಮಾಗಳಲ್ಲಿ ರೋಗ ಹಾಗೂ ಪ್ರೀತಿಯನ್ನು ಮುಖ್ಯವಸ್ತುವನ್ನಾಗಿಸಿಕೊಂಡು ಸಿನಿಮಾ ಚಿತ್ರಿಸಲಾಗಿದೆ. ಕನ್ನಡ ಚಿತ್ರರಂಗದ ಪ್ರಖ್ಯಾತ ನಿರ್ದೇಶಕ ಪುಟ್ಟಣ್ಣ ಕಣಗಾಲರರ ಸಿನಿಮಾಗಳು ಎಂದೂ ಮರೆಯಲಾಗದ್ದು. ಇಂದಿಗೂ ಅವರ ಸಿನಿಮಾ ಒಳಗೊಂಡ ಕಥಾ ಹಂದರಗಳು ಪ್ರೇಕ್ಷಕರ ಮನಃಪಟಲದಲ್ಲಿ ಅಚ್ಚಾಗಿ ಹೋಗಿವೆ. ಅಂತಹ ಸಿನಿಮಾಗಳಲ್ಲಿ ಶರಪಂಜರವೂ ಒಂದು. ಜೀವನದಲ್ಲಿ ನಡೆದ ಯಾವುದೋ ಕಹಿ ಘಟನೆಯ ನೆನಪುಗಳು ನಾಯಕಿಗೆ ಮರುಕಳಿಸಿ ಸ್ಕ್ರಿಜೋಫ್ರೀನಿಯಾ ರೋಗಕ್ಕೆ ತುತ್ತಾಗುವ ಈಕೆ ತನ್ನ ಮಾನಸಿಕ ಸ್ಥಿಮಿತತೆ ಕಳೆದುಕೊಳ್ಳುತ್ತಾಳೆ. ಜನರಿಂದ ಹುಚ್ಚಿ ಎಂದು ಕರೆಸಿಕೊಂಡು ಹುಚ್ಚಾಸ್ಪತ್ರೆಯ ಅಥಿತಿಯಾಗಿ ಅನೇಕ ಸಮಯಗಳಿದ್ದು ನಂತರ ಗುಣಮುಖಳಾಗಿ ಬರುತ್ತಾಳೆ. ಮತ್ತೆ ತನ್ನ ಗಂಡ,ಮಕ್ಕಳಿಂದ ಪ್ರೀತಿ ಬಯಸುವ ಈಕೆಗೆ ಸಿಗುವುದು ಜನರ ಹುಚ್ಚಿ ಎಂಬ ಪಟ್ಟ. ಇದರಿಂದ ನೊಂದು ಮತ್ತೆ ಹುಚ್ಚಿಯಾಗುವ ಈ ಸಿನಿಮಾ ದುಃಖಾಂತ್ಯವನ್ನು ಹೊಂದಿದ್ದು ಹೆಣ್ಣಿನ ಮನದ ನೋವನ್ನು ಎಳೆ ಎಳೆಯಾಗಿ ಚಿತ್ರಿಸಲಾಗಿದೆ. ಇದರಲ್ಲಿನ ಕಥಾಹಂದರ ನಿರ್ದೇಶಕನ ಹೆಸರನ್ನು ಶಾಶ್ವತವಾಗಿಸಿದೆ. ರೋಗದಿಂದ ಬಳಲುತ್ತಿರುವ ವ್ಯಕ್ತಿಗೆ ಪ್ರೀತಿಯ ಆಸರೆ ಎಷ್ಟು ಮುಖ್ಯ ಎಂಬುದನ್ನು ಈ ಸಿನಿಮಾ ತಿಳಿಸುತ್ತದೆ. ಇನ್ನು ಕನ್ನಡದ ಮಹೇಶ್ವರ ಸಿನಿಮಾ ಕೂಡ ಇದೇ ತೆರನಾದ ಮಾನಸಿಕ ರೋಗಿಯ ಬಗೆಗೆ ಮೂಡಿ ಬಂದಿದ್ದು ಒಬ್ಬ ಹುಚ್ಚನನ್ನು ಯಾವರೀತಿ ಪ್ರೀತಿ ವಿಶ್ವಾಸದಿಂದ ಸರಿಪಡಿಸಬಹುದು ಎಂಬುದನ್ನು ತಿಳಿಸುತ್ತದೆ. ಏಕ್ ಹಸೀನಾ ಥೀ ಎಂಬ ಹಿಂದಿ ಸಿನಿಮಾವೊಂದು ಬಂದಿತ್ತು. ಆ ಸಿನಿಮಾದಲ್ಲಿ ಊರ್ಮಿಳಾ ಮಾಂತೋಡ್ಕರ್ ಹಾಗೂ ಫಿರೋಝ್ ಖಾನ್ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಾರೆ. ಮಾನಸಿಕ ರೋಗದಿಂದ ಬಳಲುತ್ತಿರುವ ನಾಯಕಿ ಊರ್ಮಿಳಾ ಒಬ್ಬ ಫ್ಯಾಶನ್ ಫೋಟೋಗ್ರಾಫರ್‌ಗೆ ಕಾಣಿಸಿಕೊಳ್ಳುತ್ತಾಳೆ. ಆಕೆಯ ಸ್ಥಿತಿಯ ಬಗೆಗೆ ಅರಿವಿರದ ನಾಯಕ ಫ್ಯಾಶನ್ ಲೋಕಕ್ಕೆ ಪರಿಚಯಿಸುತ್ತಾನೆ. ನಾಯಕಿ ಊರ್ಮಿಳಾ ಆತನ ಸಖ್ಯದಿಂದ ಆತನನ್ನು ಪ್ರೇಮಿಸುತ್ತಾಳೆ. ಆತ ಒಬ್ಬ ಸಂಸಾರಿ ಎಂಬ ವಿಷಯ ತಿಳಿದಾಗ ಆತನ ಪತ್ನಿಯನ್ನು ಕೊಂದಾದರೂ ಸರಿಯೆ ತಾನು ಆತನನ್ನು ವಿವಾಹವಾಗಬೇಕೆಂಬ ಹಠಕ್ಕೆ ಬೀಳುತ್ತಾಳೆ. ಕೊನೆಗೆ ಆಕೆಯ ಮಾನಸಿಕ ಸ್ಥಿತಿ ತಿಳಿದು ಆಕೆಯನ್ನು ಮಾನಸಿಕ ಆಸ್ಪತ್ರೆಗೆ ದಾಖಲಿಸಲಾಗುತ್ತದೆ. ಇಲ್ಲಿ ರೊಗದ ಬಗೆಗೆ ಮಾಹಿತಿ ನೀಡದಿದ್ದರೂ ಮಾನಸಿಕ ಸ್ಥಿಮಿತ ಕಳೆದುಕೊಂಡ ಹೆಣ್ಣಿನ ಚಿತ್ರಣ ನೀಡಲಾಗಿದೆ.ಇದೇ ರೀತಿ ಶಬ್ದ್ ಎಂಬ ಸಿನಿಮಾ ಕೂಡ ಬಂದಿತ್ತು. ಕನ್ನಡದ ನೀಲಾ ಸಿನಿಮಾ ವಿಬಿನ್ನ ರೀತಿಯ ಕಥೆ ಹೊಂದಿದ ಸಿನಿಮಾ. ಇದರಲ್ಲಿ ನಾಯಕಿ ಗಾಯಕಿಯಾಗಿದ್ದು ಆಕೆ ಲಂಗ್ಸ್ ಕ್ಯಾನ್ಸರ್‌ಗೆ ತುತ್ತಾಗುತ್ತಾಳೆ. ಕಿಮೋತೆರಪಿಗೆ ಒಳ ಪಡುವ ಆಕೆಯ ಹತಾಶೆ, ನೋವುಗಳು ಸಿನಿಮಾದ ಒಂದು ಮುಖ್ಯ ಭಾಗವಾಗಿ ಕಂಡುಬರುತ್ತದೆ. ಆಕೆಯ ರೋಗ ಮೊದಲ ಹಂತದಲ್ಲೆ ಗುರುತಿಸಲ್ಪಡುವ ಕಾರಣ ಗುಣಮುಖಳಾಗಿ ಹೊರಬರುತ್ತಾಳೆ. ಈ ಮೂಲಕ ಜನರಿಗೆ ಕ್ಯಾನ್ಸರ್ ಚಿಕಿತ್ಸೆಯ ಬಗೆಗೆ ನಂಬಿಕೆ ಮೂಡಿಸುವಲ್ಲಿ ಈ ಸಿನಿಮಾ ಯಶಸ್ವಿಯಾಗಿದೆ. ಇನ್ನು ಹಿಂದಿಯಲ್ಲಿ ಇತ್ತೀಚೆಗೆ ಬಂದಂತಹ ಸಿನಿಮಾ ಗುಜಾರಿಶ್ ಕೂಡ ಒಂದು ಅದ್ಭುತ ಕಥಾ ಹಂದರವನ್ನು ಒಳಗೊಂಡಿರುವಂತಾದ್ದು. ಆಕ್ಸಿಡೆಂಟ್‌ಗೆ ತುತ್ತಾಗುವ ನಾಯಕ ನಟ ತನ್ನ ದೇಹದ ವಶವನ್ನೇ ಕಳೆದುಕೊಳ್ಳುತ್ತಾನೆ. ಪ್ರತಿಯೊಂದಕ್ಕೂ ಸಹಾಯಕರ ಸಹಾಯ ಬಯಸುವ ಇತ ತನ್ನಂತೆ ಪ್ಯಾರಾಲಿಸೀಸ್‌ಗೆ ಒಳಗಾದ ಜನರಿಗೆ ಜೀವನದ ಬಗೆಗೆ ಆಸೆ ಚಿಗುರಿಸುತ್ತಾನೆ. ಆದರೆ ತನ್ನ ಜೀವನದ ಆಸೆಯನ್ನು ಕಳೆದುಕೊಳ್ಳುವ ಈತ ಕಾನೂನು ರೀತ್ಯಾ ಆತ್ಮಹತ್ಯೆಯ ಮನವಿಯನ್ನು ಸಲ್ಲಿಸುತ್ತಾನೆ. ಈ ಸಂದರ್ಭದಲ್ಲಿ ಆತನ ಸೇವೆ ಮಾಡುವ ನರ್ಸ್ ಹಾಗೂ ಆತನ ಮದ್ಯೆ ನಿಷ್ಕಲ್ಮಶ ಪ್ರೀತಿ ಚಿಗುರುತ್ತದೆ. ಈ ಮೇಲಿನ ಎಲ್ಲಾ ಸಿನಿಮಾಗಳೂ ಸಂಪೂರ್ಣವಾಗಿ ರೋಗದ ಬಗೆಗೆ ಮಾಹಿತಿ ಪೂರ್ಣವಾಗಿ ಮೂಡಿ ಬಂದಿಲ್ಲ. ಕಾರಣ ಅದರ ಮುಖ್ಯ ಕಥಾ ವಸ್ತು ಪ್ರೀತಿ,ಜೀವನೋತ್ಸಾಹ ವಾಗಿರುವುದು. ಈ ಮೇಲಿನ ಎಲ್ಲಾ ಸಿನಿಮಾಗಳೂ ಕೂಡ ಒಬ್ಬ ರೋಗಿಗೆ ಪ್ರೀತಿಯ ಅವಶ್ಯಕತೆ ಎಷ್ಟರ ಮಟ್ಟಿಗೆ ಅವಶ್ಯ ಎಂಬುದನ್ನು ಬಹಳ ಸುಂದರವಾಗಿ ಚಿತ್ರಿಸಿದೆ. ಇನ್ನು ಮನುಷ್ಯ ಹೇಗೆ ತನ್ನ ತಪ್ಪುಗಳಿಂದ ಮಾನಸಿಕ ರೋಗಕ್ಕೆ ಬಲಿಯಾಗುತ್ತಾನೆ ಎಂಬುದಕ್ಕೆ ಕೆಲವೊಂದು ಕಾದಂಬರಿ ಆದಾರಿತ ಸಿನಿಮಾಗಳು ಸಾಕ್ಷಿ. ಶೇಕ್ಸ್‌ಪಿಯರನ ಕಾದಂಬರಿಗಳನ್ನು ನಾವಿಲ್ಲಿ ನೆನಪಿಸಿಕೊಳ್ಳಬಹುದು. ಈತನ ಅನೇಕ ಕಾದಂಬರಿಗಳು ಉದಾ: ಮ್ಯಾಕ್‌ಬೆತ್, ಜೂಲಿಯಸ್ ಸೀಸರ್ ಮುಂತಾದುವು ಸಿನಿಮಾವಾಗಿ ತೆರೆಕಂಡಿವೆ. ನಾಯಕ ತನ್ನ ತಪ್ಪುಗಳಿಂದ ಕೀಳರಿಮೆಗೊಳಗಾಗಿ ಆತನ ಕೀಳರಿಮೆಯೇ ಭೂತದ ಕಲ್ಪನೆ ಮೂಡಿಸಿ ಮಾನಸಿಕವಾಗಿ ಕುಗ್ಗಿ ಕೊನೆಗಾಣುವುದು ಕಥಾವಸ್ತು. ಮ್ಯಾಕ್‌ಬೆತ್ ಹಾಗೂ ಆತನ ಪತ್ನಿ ಲೇಡಿ ಮ್ಯಾಕ್‌ಬೆತ್ ಬ್ಯಾಂಕೋನನ್ನು ಅಧಿಕಾರದ ಆಸೆಯಿಂದ ಕೊಲೆಯೆಸಗಿ ನಂತರ ತಮ್ಮ ತಪ್ಪಿನ ಅರಿವಾಗಿ ಅನುಭವಿಸುವ ಕೀಳರಿಮೆಯೇ ಇಬ್ಬರನ್ನೂ ಕೊನೆಗಾಣಿಸುತ್ತದೆ. ೧೯೭೮ರಲ್ಲಿ ಬಂದ ಈ ಸಿನಿಮಾ ಶೆಕ್ಸ್ ಪಿಯರನ ಕಾದಂಬರಿಯನ್ನ ಯಥಾವತ್ತಾಗಿ ಬಟ್ಟಿ ಇಳಿಸಿದಂತಿದೆ. ೧೯೪೮ರಲ್ಲಿ ಆನ್ ಆಕ್ಟ್ ಆಫ್ ಮರ್ಡರ್ ಎಂಬ ಇಂಗ್ಲೀಷ್ ಸಿನಿಮಾವೊಂದು ಬಂದಿತ್ತು. ಅದರಲ್ಲಿ ನಾಯಕ ನಟ ಬ್ರೈನ್‌ಟ್ಯೂಮರಿಂದ ಬಳಲುವ ತನ್ನ ಪ್ರೀತಿಯ ಪತ್ನಿಯ ನೋವು ನೋಡಲಾರದೆ ಆಕೆಯನ್ನು ಅಫಘಾತದ ಸಂದರ್ಭ ಸೃಷ್ಟಿಸಿ ಕೊಲೆಯೆಸಗುತ್ತಾನೆ.ನಂತರ ಆತ ತಪ್ಪಿನ ಅರಿವಾಗಿ ಅತೀವ ನೋವು ಪಡುತ್ತಾನೆ ನಂತರ ತನ್ನನ್ನು ತಾನು ಕಾನೂನು ರೀತ್ಯಾ ಶರಣಾಗಿ ಶಿಕ್ಷೆಗೆ ಒಳಪಡುವ ಈ ಕಥೆ ಹೃದಯ ವಿದ್ರಾವಕವಾಗಿ ಮೂಡಿಬರುತ್ತದೆ. ಇನ್ನು ೧೯೯೫ರಲ್ಲಿ ತೆರೆಕಂಡ ೩೦೧/೩೦೨ ಎಂಬ ಕೊರಿಯನ್ ಸಿನಿಮಾ ಈಟಿಂಗ್ ಡಿಸ್‌ಆರ್ಡರ್‍ಸ್ ನಿಂದ ಬಳಲುವ ಮಹಿಳೆಯರ ಬಗೆಗೆ ಚಿತ್ರಿಸಲಾಗಿದೆ. ಸಿನಿಮಾದ ಶೀರ್ಷಿಕೆ ಸೂಚಿಸುವಂತೆ ೩೦೧/೩೦೨ ಎಂಬುದು ಸಿಯೋಲ್‌ನಲ್ಲಿರುವ ಎರಡು ಅಪಾರ್ಟ್‌ಮೆಂಟ್‌ಗಳ ಸಂಖ್ಯೆಯಾಗಿದ್ದು ಅದರಲ್ಲಿ ಬದುಕುವ ಈಟಿಂಗ್ ಡಿಸ್‌ಆರ್ಡರ್‍ಸ್ ನಿಂದ ಬಳಲುತ್ತಿರುವ ಎರಡು ಮಹಿಳೆಯರ ಮಾನಸಿಕ ಸ್ಥಿತಿಯನ್ನು ಚಿತ್ರಿಸಲಾಗಿದೆ. ಈ ಸಿನಿಮಾದಲ್ಲಿ ನಿರ್ದೇಶಕ ಪಾರ್ಕ್ ಸಂಪೂರ್ಣವಾಗಿ ಮನುಷ್ಯ ಹಾಗೂ ಆಹಾರದ ನಡುವಿನ ಸಂಬಂಧವನ್ನು ಚಿತ್ರಿಸುವತ್ತ ಗಮನಹರಿಸಿದ್ದಾರೆ. ಇನ್ನು ೧೯೮೧ರಲ್ಲಿ ದಿ ಬೆಸ್ಟ್ ಲಿಟಲ್ ಗರ್ಲ್ ಇನ್ ದಿ ವರ್ಲ್ಡ್ ಎಂಬ ಸಿನಿಮಾವೊಂದು ತೆರೆಗೆ ಬಂತು. ಒಂದು ಕುತೂಹಲಕಾರಿ ಒಳಗೊಂಡಿರುವ ಸಿನಿಮಾದಲ್ಲಿ ಕ್ಯಾಸಿ ಪೌಲ್ ಎಂಬ ಒಬ್ಬ ಟೀನೇಜ್ ಯುವತಿ ನಾಯಕಿ. ಈಕೆ ಎನೋರೆಕ್ಸಿಯಾ ನೆರ್‍ವೋಸಾ ಎಂಬ ಮಾನಸಿಕ ಹಾಗೂ ದೈಹಿಕ ಕಾಯಿಲೆಗೆ ತುತ್ತಾಗಿರುತ್ತಾಳೆ. ಈ ಹುಡುಗಿಯನ್ನು ಆಕೆಯ ರೋಗ ಆಕೆಯನ್ನು ಕೊಲ್ಲುವ ಮೊದಲೇ ಆಕೆಯನ್ನು ತಂದೆ ತಾಯಿಯರು ತಮ್ಮ ಕಷ್ಟ ನೋವನ್ನು ಬದಿಗಿಟ್ಟು ಮಾನಸಿಕ ಧೈರ್ಯ ತುಂಬುವ ಕಾರ್ಯ ಕೈಗೊಳ್ಳುತ್ತಾರೆ. ಇನ್ನು ೧೯೬೫ರಲ್ಲಿ ರಿಪಲ್ಶನ್ ಎಂಬ ಸೈಕಾಲಾಜಿಕಲ್ ಹಾರರ್ ಸಿನಿಮಾವೊಂದು ತೆರೆಕಂಡಿತ್ತು. ರೊಮನ್ ಪೊಲಾನ್ಸ್ಕಿ ಚಿತ್ರಿಸಿದ ಈ ಸಿನಿಮಾ ಆ ಕಾಲದಲ್ಲಿ ಅನೇಕ ಪ್ರಶಸ್ತಿಗಳನ್ನು ಬಾಚಿಕೊಂಡಂತಾದ್ದು. ನಾಯಕಿ ಕ್ಯಾರೋಲ್ ಲಿಡಾಕ್ಸ್ ತನ್ನ ಅಕ್ಕ ಹೆಲೆನ್‌ಳೊಂದಿಗೆ ಲಂಡನ್‌ನ ಕ್ಯಾಸಿಂಗ್ಟನ್‌ನಲ್ಲಿ ವಾಸಿಸುತ್ತಿರುತ್ತಾಳೆ. ಆಕೆ ಬೆಲ್ಜಿಯನ್ ಮ್ಯಾನಿಕ್ಯುರಿಸ್ಟ್ ಅಂದರೆ ಯಾವತ್ತೂ ಉಗುರು ಕಡಿಯುವ ಅಭ್ಯಾಸ ಹೊದಿರುವ ನಾಯಕಿ ನಿದ್ದೆಯಲ್ಲಿ ನಡೆದಾಡುವ ಹಾಗೂ ಗಂಡಸರೊಂದಿಗೆ ಅವಾಚ್ಯವಾಗಿ ಮಾತನಾಡುವ ರೋಗದಿಂದ ಬಳಲುತ್ತಿರುತ್ತಾಳೆ.ಇದರಿಮದಾಗಿ ತನ್ನ ಗೆಳೆಯನಿಂದಲೂ ದೂರವಾಗುತ್ತಾಳೆ. ತನ್ನ ಅಕ್ಕ ಆಕೆಯ ಹುಡುಗನಿಂದ ದೈಹಿಕವಾಗಿ ಹಿಂಸೆಗೊಳಪಡುತ್ತಿರುವುದು ತಿಳಿದಾಗ ಮಾನಸಿಕವಾಗಿ ವ್ಯಗ್ರಳಾಗುತ್ತಾಳೆ. ಅಕ್ಕ ತನ್ನ ಹುಡುಗನೊಂದಿಗೆ ಹೊರಗೆ ಹೋಗಿರುತ್ತಾಳೆ. ಮನೆಯಲ್ಲಿ ಒಬ್ಬಳೆ ಉಳಿವ ನಾಯಕಿ ತನ್ನ ಮನೋ ವಿಕಲ್ಪಗಳಿಂದ ಹ್ಯಾಲ್ಯುಸಿನೇಷನ್ ಅಥವಾ ಭ್ರಮೆಗೆ ಒಳಗಾಗುತ್ತಾಳೆ. ಯಾವುದೋ ವ್ಯಕ್ತಿಯಿಂದ ದೈಹಿಕ ಹಿಂಸೆಗೆ ಒಳಗಾದಂತೆ ತಾನು ಅತನನ್ನು ಕೊಂದಂತೆ ಭ್ರಮಿಸುತ್ತಾಳೆ. ಬೆಳಗಿನ ದಿನ ಅಪಾರ್ಟ್‌ಮೆಂಟ್ ಮಾಲೀಕ ತಿಂಗಳ ಪಾವತಿ ತಡವಾದುದಕ್ಕೆ ಕಾರಣ ವಿಚಾರಿಸಲು ಬಂದಾಗ ಆಕೆಯನ್ನು ಕೆಟ್ಟದಾಗಿ ನಡೆಸಿಕೊಳ್ಲುತ್ತಾನೆ. ಮತ್ತೆ ವ್ಯಗ್ರಳಾಗುವ ನಾಯಕಿ ಆತನನ್ನು ಕೊಲೆಗೆಡವುತ್ತಾಳೆ. ಈ ಸಿನಿಮಾದಲ್ಲಿ ನಾಯಕಿ ತನ್ನ ಬಾಲ್ಯದಲ್ಲಿ ತನ್ನ ತಂದೆಯಿಂದ ದೈಹಿಕ ಕಿರುಕುಳಕ್ಕೆ ಒಳಗಾಗಿರುತ್ತಾಳೆ. ಪ್ರೀತಿ ಕಾಣದ ಆಕೆಗೆ ತಾನು ಇಷ್ಟ ಪಡುವ ವ್ಯಕ್ತಿಯಿಂದಲೂ ನಿರಾಶೆಯಾಗುತ್ತದೆ.ಅದೇ ಆಕೆಯ ಮಾನಸಿಕ ಸ್ಥಿತಿಗೆ ಕಾರಣವಾಗುತ್ತದೆ. ಈ ಸಿನಿಮಾ ಭಯಾನಕವಾಗಿ ಚಿತ್ರಿಸಲ್ಪಟ್ಟಿದ್ದು ಮಾನಸಿಕ ರೋಗಕ್ಕೆ ತುತ್ತಾಗುವ ನಾಯಕಿ ಮನೊಸ್ಥಿತಿಯನ್ನು ಎಳೇ ಎಳೆಯಾಗಿ ಮಂಡಿಸಿದ್ದಾರೆ ನಿರ್ದೇಶಕ. ಮಲೆಯಾಳಂನಲ್ಲಿ ಮಣಿಚಿತ್ರತ್ತಾಳ್ ಎಂಬ ಭಯಾನಕ ಸಿನಿಮಾವೊಂದು ಬಂದಿತ್ತು. ಅದೂ ಕೂಡ ಒಬ್ಬ ಮಾನಸಿಕ ರೋಗಿಯ ಕುರಿತಾಗಿದ್ದು ರೋಗಿ ಮನೋಸ್ಥಿತಿಯನ್ನು ಹೇಗೆ ನಾಯಕ (ಡಾಕ್ಟರ್) ಹಂತ ಹಂತವಾಗಿ ಬಿಡಿಸುತ್ತಾನೆ ಎಂಬುದು ಚಿತ್ರದ ವೈಶಿಷ್ಟ್ಯ. ಮನೋರೋಗದ ಬಗೆಗೆ ಅನೇಕ ಸಿನಿಮಾಗಳು ಬಂದಿವೆ. ಅದರೊಂದಿಗೆ ಇತರೆ ಕಥಾವಸ್ತುಗಳು ಸಮ್ಮಿಳಿತಗೊಂಡು ಸಿನಿಮಾ ಪ್ರಸ್ತುತ ಪಡಿಸಲಾಗಿದೆ. ಆದರೆ ನಂತರದ ದಶಕಗಳಲ್ಲಿ ಬಂದಂತಹ ಫಿರ್ ಮಿಲೇಂಗೆ,ಬ್ಲ್ಯಾಕ್,ಪಾ,ತಾರೆ ಜಮೀನ್ ಪರ್ ಸಿನಿಮಾಗಳು ಇದರಿಂದ ಹೊರತಾದುದು. ಇಲ್ಲಿ ಮುಖ್ಯ ಕಥಾವಸ್ತುವೇ ಜನರನ್ನು ಕಾಡುವ ರೋಗ. ಶಿಲ್ಪಾ ಶೆಟ್ಟಿ,ಸಲ್ಮಾನ್ ಅಭಿನಯದ ಫಿರ್ ಮಿಲೇಂಗೆ ಸಿನಿಮಾ ನೆನಪಿರಬಹುದು. ೧೯೮೦ರ ದಶಕದಲ್ಲಿ ಜನರ ನಿದ್ದೆಗೆಡಿಸಿದ ಏಡ್ಸ್ ರೋಗದ ಕುರಿತಾದ ಈ ಸಿನಿಮಾ ಶಿಲ್ಪಾಗೆ ಎಲ್ಲಿಲ್ಲದ ಹೆಸರು ತಂದುಕೊಟ್ಟಿತ್ತು. ಆಕೆಯನ್ನ ಒಬ್ಬ ಸಮಾಜ ಸೇವಕಿಯಾಗಿ ಗುರುತಿಸಿತ್ತು. ಫಿರ್ ಮಿಲೇಂಗೆ ಸಿನಿಮಾದ ನಾಯಕಿ ಶಿಲ್ಪಾ ಶೆಟ್ಟಿಗೆ ಸಲ್ಮಾನ್ ಬಾಲ್ಯ ಸ್ನೇಹಿತ. ವಿದೇಶದಿಂದ ಊರಿಗೆ ಬರುವ ಈತ ನಾಯಕಿಯೊಂದಿಗೆ ಪ್ರೀತಿಯ ಬಲೆಗೆ ಬೀಳುತ್ತಾನೆ. ಇಬ್ಬರ ನಡುವೆ ದೈಹಿಕ ಸಂಪರ್ಕವೂ ನಡೆಯುತ್ತದೆ. ನಂತರ ಮತ್ತೆ ವಿದೇಶಕ್ಕೆ ತೆರಳುವ ನಾಯಕ ನಾಯಕಿಯಿಂದ ಸಂಪೂರ್ಣ ದೂರವಾಗುತ್ತಾನೆ. ನಂತರ ಆತ ನಾಯಕಿಯೊಂದಿಗೆ ಬೇಟಿಯಾಗುವುದು ಆಸ್ಪತ್ರೆಯಲ್ಲಿ. ಆಗ ಆತ ಹೇಳುವ ಕಥೆ ಎಲ್ಲರ ಹೃದಯವನ್ನು ಕರಗಿಸುವಂತಾದ್ದು. ಭಾರತಕ್ಕೆ ಬರುವ ಮೊದಲು ಆತನಿಗೆ ಅಫಘಾತವಾಗಿ ರಕ್ತ ಪಡೆದಿರಬೇಕಾದರೆ ಏಡ್ಸ್ ರೋಗ ತಗುಲಿರುತ್ತದೆ. ಇದು ತಿಳಿಯದ ನಾಯಕ ನಾಯಕಿಯೊಂದಿಗೆ ಸೇರುತ್ತಾನೆ. ಇಷ್ಟನ್ನು ಹೇಳಿ ನಾಯಕ ಸಾವನ್ನಪ್ಪುತ್ತಾನೆ. ತನಗೂ ಏಡ್ಸ್ ಇರುವುದು ತಿಳಿದಾಗ ಆಕೆ ಕುಗ್ಗಿದರೂ ಮತ್ತೆ ತನ್ನ ಜೀವನವನ್ನು ಸವಾಲಾಗಿ ಸ್ವೀಕರಿಸುವುದು ಕಥೆ. ಆಕೆಗೆ ಎದುರಾಗುವ ಕಷ್ಟಗಳು ಸಾರ್ವಜನಿಕವಾಗಿ ಆಗುವ ಅವಮಾನಗಳು ಸಿನಿಮಾದ ಕಥೆಯನ್ನು ಇನ್ನಷ್ಟು ಗಟ್ಟಿಯಾಗಿಸುತ್ತದೆ. ಸಿನಿಮಾದಲ್ಲಿ ನಾಯಕಿಯ ಜೀವನೋತ್ಸಾಹ ಜನರಿಗೆ ಅಂದು ಮಾರ್ಗದರ್ಶಕವಾಗಿ ಕಂಡಿದ್ದು ಸತ್ಯ. ನಂತರ ಫಿರ್ ಮಿಲೇಂಗೆ ಎಂಬ ಹೆಸರಲ್ಲಿ ಅನೇಕ ಕಾರ್ಯಕ್ರಮಗಳು ಸಾಮಾಜಿಕ ಕಳಕಳಿಯ ಕಾರ್ಯಗಳು ದೇಶದಾದ್ಯಂತ ಕೈಗೊಳ್ಳಲಾಯಿತು. ಕಪ್ಪು ಲೋಕ ಇದ್ದರೆ ಹೇಗಿರಬಹುದು? ಕಪ್ಪು ಬೆಟ್ಟ ಕಪ್ಪ್ಪು ನದಿ ಕಪ್ಪು ಹಕ್ಕಿಗಳು ಕಪ್ಪು ಮರ... ಬಣ್ಣಗಳನ್ನು ಕಂಡ ನಮಗಂತೂ ಸುಂದರವಾಗಿರಲು ಕಷ್ಟ.. ಆದರೆ ಕುರುಡರಿಗೆ? ಬಣ್ಣದ ಲೋಕದ ಪರಿಚಯ ಅವರಿಗಿದೆಯೇ? ಬಣ್ಣವನ್ನು ಒಬ್ಬ ಕುರುಡನಿಗೆ ವಿವರಿಸಲು ಸಾದ್ಯವೇ..?ಕಪ್ಪು ಲೋಕದಲ್ಲಿ ಬಣ್ಣಗಳ ಕಾಮನ ಬಿಲ್ಲು ಮೂಡಿಸಲು ಸಾದ್ಯವೇ.. ಎಂಬ ಸವಾಲಿಗೇ ಸವಾಲೊಡ್ಡಿದವರು ಬ್ಲಾಕ್ ಸಿನಿಮಾದ ನಿರ್ದೇಶಕ ಸಂಜಯ್ ಲೀಲಾ ಬನ್ಸಾರಿ. ಬ್ಲಾಕ್ ಎಂಬ ಈ ಲೆಜೆಂಡರೀ ಸಿನಿಮಾವನ್ನು ಯಾವ ಸಿನಿಮಾಗೂ ಹೋಲಿಸಲು ಸಾದ್ಯವಿಲ್ಲ. ಕಾರಣ ಈ ಸಿನಿಮಾದ ನಿರ್ಮಾಣದ ಹಿಂದೆ ಆ ಮಟ್ಟಿನ ಶ್ರಮವಿದೆ. ಈ ಸಿನಿಮಾದ ಪ್ರೇಕ್ಷಕರನ್ನು ಹಿಡಿದಿಡುವುದು ಸಿನಿಮಾದ ಎರಡೇ ಎರಡು ಅತೀ ಮುಖ್ಯ ಪಾತ್ರಗಳು. ಸಿನಿಮಾದ ನಾಯಕಿ ಅಯೇಶಾ ಕಪೂರ್(ರಾಣಿ ಮುಖರ್ಜಿ) ಒಬ್ಬ ಕುರುಡಿ ಮಾತ್ರವಲ್ಲ ಕಿವುಡಿ ಕೂಡ. ಈಕೆಗೆ ತನ್ನ ಕತ್ತಲೆಯ ಲೋಕದಲ್ಲಿ ಕುಣಿದಾಡುವ ಆಸೆ. ಎಳೆಯ ಪ್ರಾಯದಲ್ಲಿ ಎಲ್ಲ ಮಕ್ಕಳಂತೆ ಆಡುವ ಆಸೆ.ಆದರೆ ಆಕೆಯ ಸ್ಥಿತಿಯಲ್ಲಿ ಅದು ಸಾದ್ಯವಾಗದ ಮಾತು. ಇದರಿಂದ ಆಕೆಯ ಹತಾಶೆ ಹಿಂಸೆಗೆ ತಿರುಗುತ್ತದೆ. ಇದೇ ಸಂದರ್ಬದಲ್ಲಿ ದೇಬರಾಜ್ ಸಹಾಯ್(ಅಮಿತಾಬ್ ಬಚ್ಚನ್) ಎಂಬಾತ ಆಕೆಗೆ ಶಿಕ್ಷಕನಾಗಿ ಬರುತ್ತಾನೆ. ಕುಡಿತದ ದಾಸನಾದ ಈತ ಬೇರೆ ಯಾರಿಂದಲೂ ಸಾದ್ಯವಾಗದ ಸವಾಲಾದ ಈಕೆಯ ಶಿಕ್ಷಣದ ಬಾರ ಹೊರುತ್ತಾನೆ. ಆಕೆಗೋಸ್ಕರವೇ ಜೀವಿಸ ಬಯಸುತ್ತಾನೆ.. ಆಕೆ ಸಾಮಾನ್ಯರಂತೆ ಜೀವಿಸಲು ಅವಕಾಶ ಕಲ್ಪಿಸಿಕೊಡುತ್ತಾನೆ. ಅಂತೆಯೇ ಆಕೆನ್ನು ಸೆಳೆದು ತನ್ನೆಲ್ಲಾ ಶ್ರಮ ಹಾಕಿ ಆಕೆಯನ್ನು ವಿದ್ಯಾವಂತಳನ್ನಾಗಿಸುತ್ತಾನೆ. ಆಕೆಯ ಭವಿಷ್ಯದ ಕನಸು ಕಾಣುತ್ತಾನೆ ಬ್ಯಾಚುಲರ್ ಆಫ್ ಆರ್ಟ್ಸ್‌ನಲ್ಲಿ ಪದವಿಧರೆಯಾಗಿಸಲು ಶ್ರಮಿಸುತ್ತಾನೆ.ಆದರೆ ವಿಧಿ ಆತನೊಂದಿಗೆ ಕ್ರೂರ ಆಟ ವಾಡುತ್ತದೆ. ದೇಬರಾಜ್ ತನ್ನೆಲ್ಲಾ ನೆನಪುಗಳನ್ನು ಕಳೆದುಕೊಂಡು ಅಲ್ಜಮೀರಿಯಾ ಕಾಯಿಲೆಗೆ ತುತ್ತಾಗುತ್ತಾನೆ. ಇಂತಾ ಸಂದರ್ಭದಲ್ಲಿ ಆಯೇಶಾ ತನ್ನ ಶಿಕ್ಷಕ ಕಲಿಸಿಕೊಟ್ಟ ಎಲ್ಲಾ ವಿದ್ಯೆಗಳನ್ನೂ ಆತನಿಗೆ ಕಲಿಸಿ ಆತನನ್ನು ಮತ್ತೆ ನೆನಪುಗಳು ಮರುಕಳಿಸುವತ್ತ ಶ್ರಮಿಸುತ್ತಾಳೇ. ಹೀಗೆ ಒಬ್ಬ ಯಾವುದೇ ಸಂಬಂಧವಿಲ್ಲದ ಶಿಕ್ಷಕ, ಲೋಕವನ್ನೆ ಕಂಡರಿಯದ ಶಿಷ್ಯೆಯರ ನಡುವಿನ ಬಾವನಾತ್ಮಕ ಸಂಬಂಧದ ಎಳೆ ನಮ್ಮನ್ನು ಕತ್ತಲ ಲೋಕದಲ್ಲಿ ಅಡಗಿರುವ ೧೨ ಬಣ್ಣಗಳನ್ನು ಪರಿಚಯಿಸುತ್ತದೆ. ಇನ್ನು ೨೦೦೯ರಲ್ಲಿ ತೆರೆ ಕಂಡ ಪಾ ಸಿನಿಮಾ ತಿಳಿಯದ ಮಂದಿಯಿಲ್ಲ. ಮದುವೆಯ ಮುಂಚೆಯೇ ಹುಟ್ಟುವ ಆರೋ ಸಿನಿಮಾದ ಕೇಂದ್ರ ಬಿಂದು. ಆರೋ ಹುಟ್ಟಿನಿಂದಲೇ ಪ್ರೊಜೀರಿಯಾ ರೋಗಕ್ಕೆ ತುತ್ತಾಗಿರುತ್ತಾನೆ. ಈ ರೋಗದ ಪ್ರಕಾರ ದೇಹದ ಬೆಳವಣಿಗೆಗೆ ಬೇಕಾದ ಜೆನೆಟಿಕ್ ಅಂಶಗಳನ್ನು ಉತ್ಪಾದಿಸಲು ದೇಹ ವಿಫಲವಾಗಿ ಮಗುವಿನ ವಯಸ್ಸಿನ ಮಟ್ಟ ಸರಿಯಾಗಿ ನಡೆಯದೇ ೬೦ರ ವ್ಯಕ್ತಿಯ ರೀತಿ ಸುಕ್ಕಾಗುವ ದೇಹ ಹಾಗೂ ಆರೋಗ್ಯದಿಂದ ಮಗು ತನ್ನ ಎಳೆ ಪ್ರಾಯದಲ್ಲೇ ಸಾವನ್ನಪ್ಪುವಂತಹ ಮಾರಕ ರೋಗದಿಂದ ಬಳಲುತ್ತಿರುತ್ತಾನೆ. ಆದರೆ ತನ್ನದೇ ಆದ ಪ್ರತಿಭೆಯಿಂದ ಶಾಲೆಯಲ್ಲಿ ಗುರುತಿಸಿಕೊಳ್ಳುವ ಈತ ಒಬ್ಬ ಯುವ ರಾಜಕಾರಣಿಗೆ(ಅಭಿಷೇಕ್ ಬಚ್ಚನ್)ಕುತೂಹಲಕಾರಿಯಾಗಿ ಕಾಣಿಸಿಕೊಳ್ಳುತ್ತಾನೆ. ಆರೋನೊಂದಿಗೆ ಸಖ್ಯ ಬೆಳೆಸಿಕೊಳ್ಳುವ ಅಭಿಷೇಕ್‌ಗೆ ಈತ ತನ್ನ ಮಗುವೇ ಎಂದು ತಿಳಿದಾಗ ಭಾವನಾತ್ಮಕವಾಗಿ ಇನ್ನಷ್ಟು ಹತ್ತಿರವಾಗುತ್ತಾನೆ. ಆರೋನ ಜೀವನದ ಆಸೆಗಳನ್ನು ಪೂರೈಸುವಲ್ಲಿ ಕಾಳಜಿವಹಿಸುತ್ತಾನೆ. ಈ ಸಿನಿಮಾ ಕುತೂಹಲಕರವಾಗಿ ಮೂಡಿಬಂದಿದ್ದು ಪ್ರೇಕ್ಷಕನ ಮನವನ್ನು ಹಿಡಿದಿಡುವಲ್ಲಿ ಸಹಾಯಕವಾಗಿದೆ. ಈ ತರಹದ ಅನೇಕ ಸಿನಿಮಾಗಳು ತೆರೆ ಕಂಡಿವೆ. ೨೦೦೯ರಲ್ಲಿ ನಿಕ್ ಕ್ಯಾಶಾವೆಟ್ಸ್‌ರ ಮೈ ಸಿಸ್ಟರ್‍ಸ್ ಕೀಪರ್ ಎಂಬ ಸಿನಿಮಾವೊಂದು ಇದೇ ರೀತಿಯ ಮಕ್ಕಳು ಎದುರಿಸುವ ರೋಗಗಳ ಬಗೆಗೆ ಮೂಡಿಬಂದಿದೆ. ತಾರೆ ಜಮೀನ್ ಪರ್ ಹೆಸರೇ ಹೇಳುವಂತೆ ನಿರ್ದೇಶಕ ಮಕ್ಕಳ ಲೋಕದ ನಕ್ಷತ್ರವನ್ನು ದರೆಗಿಳಿಸುವ ಕಾರ್ಯ ಕೈಗೊಂಡಿದ್ದಾರೆ. ೮ ವರ್ಷದ ಇಶಾನ್ ಅವಸ್ತಿ ಈ ಸಿನಿಮಾದ ನಾಯಕ ನಟ.ಈತನಿಗೆ ಬಣ್ಣ,ಪ್ರಾಣಿಗಳ ಹೆಸರು, ಸಂಖ್ಯೆಗಳನ್ನು ಗುರುತಿಸಲು ಕಷ್ಟ ಪಡುತ್ತಿರುತ್ತಾನೆ.ಆದರೆ ಆತನ ಸಂಗಡಿಗರು ಅದಾಗಲೇ ಅವನಿಂದ ಕಲಿಯುವಿಕೆಯಲ್ಲಿ ತೀರಾ ಮುಂದಿರುತ್ತಾರೆ. ತನ್ನದೇ ಲೋಕದಲ್ಲಿ ವಿಹರಿಸುವ ಈಶಾನ್‌ಗೆ ಆಸಕ್ತಿಗಳು ಇತರೆ ಮಕ್ಕಳಿಂದ ತೀರಾ ವಿಭಿನ್ನವಾಗಿರುತ್ತದೆ. ಇದನ್ನು ತಿಳಿಯದ ಶಿಕ್ಷಕರು ತಂದೆ ತಾಯಿಯಲ್ಲಿ ದೂರು ಹೇಳಿದಾಗ ಆತನನ್ನು ದೂರದ ಬೋರ್ಡಿಂಗ್ ಶಾಲೆಯೊಂದಕ್ಕೆ ಸೇರಿಸುತ್ತಾರೆ. ಜೀವನದಲ್ಲೇನೂ ಬದಲಾವಣೆಯಾಗದೆ ಅದೇ ರಿತಿ ಕಾಲಕಳೆಯುವ ಈಶಾನ್ ಬಯಸುವ ತಾಯಿ ಪ್ರೀತಿಯೂ ಇಲ್ಲದಂತಾಗುತ್ತದೆ. ಈತನ ನಡತೆಯಿಂದ ಶಿಕ್ಷಕರಿಂದ ಸಹಪಾಟಿಗಳಿಂದ ಅವಮಾನಿತನಾಗುತ್ತಾನೆ.ಅದೇ ಸಂದರ್ಭದಲ್ಲಿ ರಾಮ್ ಶಂಕರ್ ನಿಕುಂಬ್(ಅಮೀರ್ ಖಾನ್) ತಾತ್ಕಾಲಿಕವಾಗಿ ಆ ಶಾಲೆಗೆ ಚಿತ್ರದ ಶಿಕ್ಷಕನಾಗಿ ಹೋಗುತ್ತಾನೆ. ಎಲ್ಲರಿಗೂ ಅಬ್ನಾರ್ಮಲ್ ಹುಡುಗನಾಗಿ ಕಾಣುವ ಈಶಾನ್ ಅಮೀರ್‌ಖಾನ್‌ಗೆ ವಿಭಿನ್ನನಾಗಿ ಕಾಣಿಸುತ್ತಾನೆ. ನಂತರ ಈಶಾನ್ ಮೇಲೆ ಹೆಚ್ಚಿನ ಕಾಳಜಿ ವಹಿಸಿ ಆತ ಕಳೆದುಕೊಂಡ ಧೈರ್ಯ ಉತ್ಸಾಹವನ್ನು ಹಿಂಪಡೆಯುವಲ್ಲಿ ಸಹಕರಿಸುತ್ತಾನೆ. ಆತನ ಹೆತ್ತವರನ್ನು ಕರೆಸಿ ಅವರ ತಪ್ಪನ್ನು ತಿಳಿಸಿ ಇಶಾನ್ ಒಬ್ಬ ಅಸಾಮಾನ್ಯ ಹುಡುಗ ಎಂಬ ಮಾತನ್ನು ಹೇಳುತ್ತಾನೆ. ನಂತರ ಈಶಾನ್‌ನೊಳಗಿರುವ ಕುಂದು ಕೊರತೆಗಳನ್ನು ಹಂತ ಹಂತವಾಗಿ ಹೋಗಲಾಡಿಸುವಲ್ಲಿ ಯಶಸ್ವಿ ಯಾಗುವುದು ಸಿನಿಮಾದ ಹೂರಣ. ಈ ಸಿನಿಮಾ ನೋಡಿದಾಗ ತಮ್ಮ ಬಾಲ್ಯವನ್ನು ನೆನಪಿಸಿಕೊಂಡು ಕಣ್ಣಿರಿಟ್ಟವರೆಷ್ಟೊ,. ಏಟು ತಿಂದ ಕೈಗಳನ್ನು ಸ್ಪರ್ಶಿಸಿ ಮತ್ತೆ ಸಿನಿಮಾ ನೋಡಿದವರೆಷ್ಟೊ, ಗಡಿಯಾರ ನೊಡಲು ಬರದಿದ್ದಾಗ ತಂದೆ ಕೈಯಿಂದ ಏಟು ತಿಂದ ಹುಡುಗನನ್ನು ಕಂಡು ಹೀಗೆ ನಾನೂ ತಿಂದಿದ್ದೆ ಏಟು ಎಂದು ತಮ್ಮ ವಯಸ್ಸಾದ ಅಪ್ಪನನ್ನೊಮ್ಮೆ ನೊಡಿದ ಮಂದಿಯೆಷ್ಟೋ. ಹೌದು, ಈ ಸಿನಿಮಾ ನೊಡಿದ ಪ್ರತಿಯೊಬ್ಬ ಪ್ರೇಕ್ಷಕನೂ ತಮ್ಮ ಬಾಲ್ಯವನ್ನೊಮ್ಮೆ ಪ್ರತ್ಯಕ್ಷವಾಗಿ ಕಂಡಿದ್ದಾರೆ. ಇತ್ತೀಚೆಗೆ ಮ್ಯಾಕ್ಸ್ ಮೇಯರ್ ನಿರ್ದೇಶಿಸಿದ ಆಡಂ ಸಿನಿಮಾ ನೆನಪಿರಬಹುದು. ಆಸ್ಪರ್‍ಜರ್ ಸಿಂಡ್ರೋಮಿಂದ ಬಳಲುವ ಆಡಂ ರಾಕಿ ಎಂಬ ಯುವಕನ ಕತೆಯನ್ನ ಬಹಳ ಸುಂದರವಾಗಿ ಪ್ರಸ್ತುತ ಪಡಿಸಲಾಗಿದೆ. ಒಬ್ಬಂಟಿಗನಾದ ನಾಯಕ ತನ್ನ ಮನೋ ವೈಕಲ್ಯತೆಯಿಂದಾಗಿ ಸಾರ್ವಜನಿಕವಾಗಿ ತೆರೆದುಕೊಳ್ಳಲು ಭಯಪಡುತ್ತಾನೆ. ಸಿನಿಮಾದ ನಾಯಕಿಗೆ ಕಾಣಿಸಿಕೊಂಡು ಆತನನ್ನು ಆಕೆ ಆತನನ್ನು ಸರಿಪಡಿಸುವಲ್ಲಿ ಹೆಣಗಾಡುವ ಹೋರಾಡುವ ಕಥಾ ಹಂದರವನ್ನು ಹೊಂದಿರುವ ಈ ಸಿನಿಮಾ ಪ್ರತಿಯೊಬ್ಬರೂ ನೋಡಲೇ ಬೇಕಾದ್ದು. ರೇಡಿಯೋದಲ್ಲಿ ನಡೆಯುತ್ತಿದ್ದ ಅಸ್ಪರಜರ್ ರೊಗಿಯೊಬ್ಬರ ಸಂದರ್ಶನದಿಂದ ಪ್ರೇರಿತರಾಗಿ ಈ ಸಿನಿಮಾದ ಕಥೆಯನ್ನು ಹೆಣೆಯಲಾಯಿತಂತೆ. ಹೀಗೆ ಅನೇಕ ಸಿನಿಮಾಗಳು ರೊಗಗಳ ಬಗೆಗೆ, ಆ ನೋವಿಂದ ರೋಗಿ ಹೇಗೆ ಹೊರಬರಬಹುದು ಎಂಬುದರ ಬಗೆಗೆ ಸುಂದರವಾಗಿ,ಸಮರ್ಪಕವಾಗಿ ಮೂಡಿಬಂದಿವೆ. ಇಂತಹ ಸಿನಿಮಾಗಳಿಂದ ಜನರು ಪಡೆದ ಮಾಹಿತಿಗಳು ಸಾಕಷ್ಟು. ಮಗು ಕಲಿಯುವಲ್ಲಿ ಹಿಂದೇಟು ಹಾಕುತ್ತಿದ್ದರೆ ಏಟೇ ಮದ್ದು ಎಂಬ ಮನೋಬಾವ ಇದ್ದ ಜನ ತಮ್ಮ ಮನೋಬಾವ ಬದಲಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮನೋವಿಕಲ್ಪಗಳನ್ನು ಕಂಡು ಹುಚ್ಚು ಎನ್ನುತ್ತಿದ್ದ ಮಂದಿ ಮೌನವಾಗಿದ್ದಾರೆ, ಸದ್ದಾದರೆ ಸಾಕು ಪ್ರೇತ ಬಾದೆ ಎಂದು ಹೊದ್ದು ಮಲಗುವ ಜನ ಹೊದಿಕೆ ಸರಿಸಿ ಕಣ್ಣು ಹಾಯಿಸುತ್ತಿದ್ದಾರೆ ಎಂದರೆ ಇಂತಹ ಮಾಹಿತಿ ಪೂರ್ಣ ಮಾದ್ಯಮಗಳಿಂದಲೆ. ----------------------- ------------------------------ ರಾಧಿಕಾ.ವಿಟ್ಲ

1 comment:

  1. ಪ್ರತೀ ಬ್ಲಾಗ್ ಬರಹಗಳನ್ನು ಓದಿ ಅವುಗಳಿಗೆ ಪ್ರತಿಕ್ರಿಯಿಸಬೇಕು ಎನ್ನುವ ನಾನು ಮತ್ತು ನನ್ನಂತ ಇನ್ನಿತರ ಕೆಲವರಿಗೆ ಎದುರಾಗೋ ಸಮಸ್ಯೆ ಎಂದರೆ-ಬ್ಲಾಗ್ನಲ್ಲಿ ಕನ್ನಡದಲ್ಲಿ ಟೈಪಿಸಲು ಆಗದೆ ಗೂಗಲ್ ಟ್ರಾನ್ಸಿಲ್ಟ್ ರೆಟರ್ ಕ್ವಿಲ್ ಪ್ಯಾಡ್ ಇತ್ಯಾದಿಯಲ್ಲಿ ಕನ್ನಡದಲಿ ಟೈಪ್ಸಿ ಹಾಕಬೇಕಾಗಿ ಬರೋದು(ನಾನು ಹಾಗೆ ಮಾಡೋದು -ಹಾಗೆ ಮಾಡಿಯೇ ಎಲ್ಲ ಬರಹಗಳನ್ನು ಬರೆಯೋದು ಪ್ರತಿಕ್ರಿಯಿಸೋದು..!)

    ಇನ್ನೊಂದು ಸಮಸ್ಯೆ ನಮ್ಮ ಪ್ರತಿಕ್ರಿಯೆ ಸೇರಿಸುವಾಗ ನಮ್ಮ ಮೇಲ್ ಐ ಡಿ ಮತ್ತು ಅಲ್ಲಿ ಬರುವ ಅಕ್ಷರ(ಅದು ಕಣ್ಣಿಗೆಕಾಣಿಸೋದು ಅಸ್ಪುಸ್ತವಾಗಿ )ವನ್ನು ಟೈಪಿಸಿ ನಮಮ್ ಪ್ರತಿಕ್ರಿಯೆ ಸೇರಿಸೋದು ಕಷ್ಟದ ಕೆಲಸ ಹೀಗಾಗಿ ಹಲವು ಜನ ಬ್ಲಾಗ್ ಓದಿ ಹಾಗೆಯೇ ಹೋಗುವರು..ಪ್ರತಿಕ್ರಿಯಿಸದೆ..;(( ಈ ಸಮಸ್ಯ್ಸೆ ಆ ಬ್ಲಾಗ್ ನಿರ್ಮಿಸಿದ ಅವರಿಗೆ(ಗೂಗಲ್ ಇತ್ಯಾದಿ) ಗಮನಕ್ಕೆ ತರೋರು ಯಾರು??

    ನಿಮ್ಮೆಲ್ಲ ಬ್ಲಾಗ್ ಬರಹಗಳು ಸೂಪರ್ ಆಗಿವೆ.. ಹಿನ್ನೆಲೆ ಬಣ್ಣ ಕೂಡ...ಆದರೆ ಅಕ್ಷರಗಳ(ಫಾಂಟ್ ಸೈಜ್) ಸೈಜ್ ಕಡಿಮೆ ಇದೆ ಅವುಗಳನ್ನು ದೊಡ್ಡದು ಮಾಡಿ ಹಾಕಿ (ಬ್ಲಾಗ್ ಎಡಿಟಿಂಗ್ನಲ್ಲಿ ಆ ಆಪ್ಶನ್ ಇದೆಯಲ್ಲ) ಆಗ ಓದಲು ಸಮಸ್ಯೆ ಆಗದು...
    >>ನನಗೂ ಸಿನೆಮಾಗಳ ಬಗ್ಗೆ ವಿಪರೀತ ಹುಚ್ಚು -ಹಲವು ನೂರು ಸಿನೆಮಾಗಳು(ಆಂಗ್ಲ ಹಿಂದಿ ಕನ್ನಡ ತೆಲುಗು ಚಿತ್ರಗಳು)ನನ್ನಸಂಗ್ರಹದಲ್ಲಿವೆ -ಈಗಲೂ ದಿನ ನಿತ್ಯ ಹಲವು ಉತ್ತಮ ಸಿನೆಮಾಗಳ ಬಗ್ಗೆ ಹುಡುಕಾಡಿ ಡೌನ್ಲೋಡ್ ಮಾಡಿ ನೋಡುವೆ ಆ ಬಗ್ಗೆ ಬರೆವೆ...

    ಶುಭವಾಗಲಿ.

    \।/

    ಸಪ್ತಗಿರಿವಾಸಿ-ವೆಂಕಟೇಶ ಮಡಿವಾಳ ಬೆಂಗಳೂರು

    ReplyDelete