Tuesday 26 March 2013

ಭೋಜ್ಪುರಿ ಸಿನಿಮಾ

ಭೋಜ್ಪುರಿ ಭಾಷೆಯ ಸಿನಿಮಾಗಳು ಬಿಹಾರದ ಸಂಸ್ಕೃತಿ,ಜನಜೀವನ ರೀತಿಯನ್ನು ಎತ್ತಿಹಿಡಿಯುತ್ತವೆ. ಉತ್ತರ ಪ್ರದೇಶದ ಪೂರ್ವ ಭಾಗ ಹಾಗೂ ದಕ್ಷಿಣ ನೇಪಾಳದಲ್ಲಿ ಈ ಸಿನಿಮಾದ ವೀಕ್ಷಕರನ್ನು ನಾವು ಕಾಣಬಹುದು. ಬಹಳ ಕ್ರಿಯಾಶೀಲವಾಗಿ ಮೂಡಿ ಬರುತ್ತಿರುವ ಈ ಭಾಷೆಯ ಸಿನಿಮಾ ರಂಗದ ಬಗ್ಗೆ ನಾವು ಒಂದಷ್ಟು ತಿಳಿದುಕೊಳ್ಳಲೇ ಬೇಕು. ವಿಶ್ವದ ಅನೇಕ ಭಾಗಗಳಲ್ಲಿ ಭೋಜ್ಪುರಿ ಸಿನಿಮಾ ಅಬಿಮಾನಿಗಳನ್ನು ನಾವು ಕಾಣಬಹುದು. ಉದಾಹರಣೆಗೆ ಬ್ರೆಜಿಲ್, ಫಿಜಿ, ಗುಯಾನಾ,ಮೌರಿತಿಯಸ್, ಸೌತ್ ಆಫ್ರಿಕಾ, ಸುರಿನೆಮೆ ಹಾಗೂ ಟ್ರಿನಿಡಾಡ್ ಹಾಗೂ ಟೊಬಾಗೋಗಳಲ್ಲಿ ಸಿನಿಮಾ ವೀಕ್ಷಕರನ್ನು ಕಾಣಬಹುದು. ೧೯ರ ಕೊನೆ ೨೦ನೇ ಶತಮಾನದ ಮೊದಲಾರ್ದದಲ್ಲಿ ಅನೇಕ ದೇಶಗಳಲ್ಲಿ ಜೀತದಾಳು ಪದ್ದತಿ ನಿರ್ಮೂಲವಾದ ಸಂದರ್ಭದಲ್ಲಿ ಅನೇಕ ದೇಶದ ಸರ್ವಾಧಿಕಾರಿಗಳಿಗೆ ಕೆಲಸಗಾರರ ಕೊರತೆ ಕಂಡುಬಂದಿದ್ದರಿಂದ ಅನೇಕ ಭಾರತೀಯರನ್ನು ಅದರಲ್ಲೂ ಭೋಜ್ಪುರಿ ಸೀಮೆಯ ಅನೇಕ ಜನರನ್ನು ವೆಸ್ಟ್ ಇಂಡೀಸ್, ಓಶನಿಯಾ ಹಾಗೂ ದಕ್ಷಿಣ ಅಮೇರಿಕಾಗೆ ಕಳುಹಿಸಲಾಯಿತು. ಇದರಿಂದಾಗಿ ಅಲ್ಲಿನ ಜನ ಭೋಜ್ಪುರಿಯನ್ನು ದ್ವಿತೀಯ ಭಾಷೆಯಾಗಿ ಬಳಸಲಾರಂಭಿಸಿದರು. ಇದರಿಂದ ಭೋಜ್ಪುರಿ ಸಿನಿಮಾ ವೀಕ್ಷಕರ ಸಂಖ್ಯೆಯೂ ವಿಸ್ತರಿಸಲ್ಪಟ್ಟಿತು. ೧೯೬೦ರಲ್ಲಿ, ಮೂಲತಃ ಬಿಹಾರದವರಾದ ಭಾರತದ ಪ್ರಥಮ ರಾಷ್ಟ್ರಪತಿ ಡಾ.ರಾಜೇಂದ್ರ ಪ್ರಸಾದ್ ಬಿಹಾರದ ಒಬ್ಬ ನಿರ್ಮಾಪಕರಾದ ಬಿಸ್ವನಾಥ್ ಪ್ರಸಾದ್ ಶಹಾಬಡಿಯವರನ್ನು ಸಂಪರ್ಕಿಸಿ ಭೋಜ್ಪುರಿ ಭಾಷೆಯಲ್ಲಿ ಸಿನಿಮಾ ನಿರ್ಮಾಣ ಮಾಡುವುದರ ಬಗ್ಗೆ ಸಲಹೆಯಿತ್ತರು. ಇದುವೆ ೧೯೬೩ರಲ್ಲಿ ಮೂಡಿಬಂದ ಗಂಗಾ ಮೈಯಾ ತೊಹೆ ಪಿಯಾರಿ ಚದೈಬೊ ಎಂಬ ಸಿನಿಮಾ ತೆರೆಕಾಣುವುದಕ್ಕೆ ಮುನ್ನುಡಿಯಾಯಿತು. ಬಿಸ್ವನಾಥ್ ಪ್ರಸಾದ್ ಶಹಾಬಡಿಯವರು ಈ ಸಿನಿಮಾದ ನಿರ್ಮಾಪಕ ಹಾಗೂ ನಿರ್ದೇಶಕರಾಗಿ ಕುಂದನ್ ಕುಮಾರ್ ಕಾರ್ಯನಿರ್ವಹಿಸಿದ್ದರು. ನಿರ್ಮಲ್ ಪಿಕ್ಚರ್‍ಸ್ ಎಂಬ ಬ್ಯಾನ್‌ರ್ ಅಡಿಯಲ್ಲಿ ಸಿನಿಮಾ ಮೂಡಿಬಂದು ಮುಂದಿನ ಸಿನಿಮಾಯಾನಕ್ಕೆ ನಾಂದಿ ಹಾಡಿತು. ಮುಂದಿನ ಕೆಲವು ವರುಷಗಳು ಕಡಿಮೆ ಸಂಖ್ಯೆಯಲ್ಲಿ ಸಿನಿಮಾಗಳು ಮೂಡಿಬಂದವು. ಇದರ ಕಥಾವಸ್ತುಗಳು ಸೀಮಿತವಾಗಿದ್ದರೂ ಸಹ ವಿಕ್ಷಕರ ಮನವನ್ನು ಗೆದ್ದಿದ್ದು ಈಗಲೂ ಹೆಸರನ್ನು ಉಳಿಸಿಕೊಂಡಿವೆ. ೧೯೬೩ರಲ್ಲಿ ಎಸ್.ಎನ್ ತ್ರಿಪಾಟಿ ನಿರ್ದೆಶಿಸಿದ 'ಬಿದೇಸಿಯಾ', ೧೯೬೫ರಲ್ಲಿ ಬಿಡುಗಡೆಯಾದ ಕುಂದನ್ ಕುಮಾರ್ ನಿರ್ದೇಶಿಸಿದ ಗಂಗಾ ಸಿನಿಮಾಗಳು ಎಂದು ಮರೆಯಲಾದಂತಾದ್ದು. ನಂತರದ ಕೆಲವು ವರ್ಷಗಳನ್ನು ನಾವು ಮೂಕದಿನಗಳು ಎನ್ನಬಹುದು ಏಕೆಂದರೆ ಈ ಸಂದರ್ಭದಲ್ಲಿ ಯಾವುದೇ ಸಿನಿಮಾಗಳು ಬಿಡುಗಡೆಯಾಗಿಲ್ಲ. ೧೯೮೦ರ ದಶಕದಲ್ಲಿ ಮತ್ತೆ ಮೇಲೆದ್ದ ಬೋಜ್ಪುರಿ ಸಿನಿಮಾ ರಂಗ ಅನೇಕ ಸಿನಿಮಾಗಳನ್ನು ನೀಡುವುದರ ಮೂಲಕ ಮೂಕ ದಿನಗಳ ಪ್ರಶ್ನೆಗಳಿಗೆ ಉತ್ತರ ನೀಡಿತು. ಕಲ್ಪತರು ನಿರ್ದೇಶನದ ಹಮರ್ ಬಾವ್ಜಿ(೧೯೮೩), ರಾಜ್‌ಕುಮಾರ್ ಶರ್ಮಾ ನಿರ್ದೇಶನದ ಮಾಯ್(೧೯೮೯) ಮುಂತಾದ ಸಿನಿಮಾಗಳು ತೆರೆಕಂಡು ಬಾಕ್ಸ್ ಆಫೀಸ್‌ನಲ್ಲಿ ಒಂದು ಮಟ್ಟಿನ ಯಶಸ್ಸನ್ನು ಕಲೆಹಾಕಿತು. ೧೯೮೨ರಲ್ಲಿ ಗೋವಿಂದ ಮೂನ್ ನಿರ್ದೇಶಿಸಿದ ನಾಡಿಯಾ ಕೆ ಪರ್ ಎಂಬ ಸಿನಿಮಾ ಹಿಂದಿ ಹಾಗೂ ಬೋಜ್ಪುರಿ ಎರಡಲ್ಲೂ ಮೂಡಿಬಂದು ಅತ್ಯುತ್ತಮ ಯಶಸ್ಸನ್ನು ಕಂಡಿತು. ಇಲ್ಲಿ ಮುಖ್ಯವಾಗಿ ಕಾಣಬೇಕಾದ ಅಂಶ ಎಂದರೆ ಇಲ್ಲಿ ನಿರ್ದೇಶಕ ಅನೇಕ ಹೆಸರಾಂತ ವ್ಯಕ್ತಿಗಳನ್ನು ಬಳಸಿಕೊಂಡಿದ್ದಾರೆ. ಇದು ಕೂಡ ಯಶಸ್ಸಿಗೆ ಕಾರಣ ಎನ್ನಬಹುದು. ೮೦ರ ದಶಕದ ಕೊನೆ ಹಾಗೂ ೯೦ರ ಆರಂಭದಲ್ಲಿ ಈ ಸಿನಿಮಾ ರಂಗ ಬಣ್ಣ ಕಳೆದುಕೊಂಡು ಬಿಟ್ಟಿತ್ತು. ಯಾವೊಂದು ಸಿನಿಮಾಗಳೂ ತೆರೆ ಕಾಣದೆ ಭೋಜ್ಪುರಿ ಸಿನಿಮಾದ ಕೊನೆಯಾಯಿತೇನೋ ಎಂಬ ಸಂದರ್ಭ ಸೃಷ್ಟಿಯಾಯಿತು. ನಂತರ ಮತ್ತೆ ಮೈ ಕೊಡವಿ ಮೇಲೆದ್ದ ಈ ಸಿನಿಮಾ ರಂಗ ೨೦೦೧ರಲ್ಲಿ ಸೈಯನ್ ಹಮಾರ್ ಎಂಬ ಹಿಟ್ ಸಿನಿಮಾ ನೀಡುವ ಮೂಲಕ ಮತ್ತೆ ಬಣ್ಣ ತುಂಬಿತು. ಸಿಲ್ವರ್ ಜ್ಯೂಬ್ಲಿ ಆಚರಿಸಿದಂತಾ ಈ ಸಿನಿಮಾ ನಿರ್ದೇಶಿಸಿದ್ದು ಮೋಹನ್ ಪ್ರಸಾದ್. ಈ ಸಿನಿಮಾದಿಂದಲೇ ಭೋಜ್ಪುರಿಯ ಸುಪರ್ ಸ್ಟಾರ್ ರವಿಕಿಸನ್ ಪರಿಚಯಿಸಲ್ಪಟ್ಟರು. ಈ ಸಿನಿಮಾದ ಯಶಸ್ಸಿಗೆ ಉತ್ತೇಜಿತರಾದ ಮೋಹನ್ ಪ್ರಸಾದ್ ಸೇರಿದಂತೆ ಅನೇಕ ಇತರೆ ನಿರ್ದೇಶಕರೂ ಸಹ ಸಿನಿಮಾ ನಿರ್ಮಾಣದತ್ತ ಮುಖ ಮಾಡಿದರು. ಇದರ ಫಲವಾಗಿಯೇ ಮೋಹನ್ ಪ್ರಸಾದ್ ನಿರ್ದೇಶನದ ಪಂಡಿತ್ ಬತೈ ನ ಬಿಯಾಹ್ ಕಬ್ ಹೋಯ್, ಸಸುರಾ ಬಡಾ ಪೈಸೇವಾಲಾ(೨೦೦೫) ಗಳು ತೆರೆ ಕಂಡವು. ವ್ಯಾವಹಾರಿಕವಾಗಿ ನೋಡಿದರೆ ಉತ್ತರ ಪ್ರದೇಶ ಹಾಗೂ ಬಿಹಾರದಲ್ಲಿ ಈ ಸಿನಿಮಾಗಳು ಯಶಸ್ಸನ್ನು ಕಂಡವು. ಅಂದಿನ ಬಾಲಿವುಡ್ ಹಿಟ್ ಸಿನಿಮಾಗಿಂತಲೂ ಬೋಜ್ಪುರಿ ಸಿನಿಮಾಗಳಿಗೆ ಬೇಡಿಕೆ ಹೆಚ್ಚಾಯಿತು. ಬೋಜ್ಪುರಿ ಸಿನಿಮಾಗಳು ನಿರ್ಮಾಣದ ಹತ್ತು ಪಟ್ಟು ಲಭ ಪಡೆದುಕೊಳ್ಳಲಾರಂಬಿಸಿತು. ಒಂದು ರೀತಿ ಸುವರ್ಣಯುಗವೇ ಶುರುವಾಗಿತ್ತು.ಮನೋಜ್ ತಿವಾರಿ,ಅಲಕಾ ಯಾದ್ನಿಕ್, ಅನುರಾದಾ ಪೌದ್ವಾಲ್, ಉದಿತ್ ನಾರಾಯಣ್ ರಂತಹ ಕೊಗಿಲೆ ಕಂಠದ ಗಾಯಕರ ವಸಂತ ಕಾಲ ಶುರುವಾಗಿತ್ತು. ೨೦೦೮ರಲ್ಲಿ ರವಿ ಕಿಸನ್ ಹಾಗೂ ಮನೋಜ್ ತಿವಾರಿ ಸಿನಿಮಾ ನಾಯಕಾರಾಗಿ ಮಿಂಚಿದರು. ಭೋಜ್ಪುರಿ ಸಿನಿಮಾ ವೀಕ್ಷಕರ ಸಂಖ್ಯೆ ಏರಿಕೆಗೆ ಇವರ ಕಲಾ ಪರಿಶ್ರಮ ಕೂಡ ಕಾರಣವಾಯಿತು. ಈಗ ವರ್ಷಕ್ಕೆ ನೂರು ಸಿನಿಮಾಗಳ ಬಿಡುಗಡೆ ಈ ಭಾಷೆಯಲ್ಲಾಗುತ್ತಿರುವುದು ಗಮನಾರ್ಹ. ಬಾಲಿವುಡ್ ಸಿನಿಮಾದ ದಂತಕಥೇ ಎನ್ನಬಹುದಾದ ಅಮಿತಾಬ್ ಬಚ್ಚನ್, ಮಿಥುನ್ ಚಕ್ರಬರ್ತಿ, ಮೊದಲಾದವರು ಭೋಜ್ಪುರಿ ಸಿನಿಮಾಗಳಲ್ಲಿ ನಟಿಸಿದ್ದಾರೆ. ೨೦೦೮ರಲ್ಲಿ ಬಿಡುಗಡೆಯಾದ ಬೋಲೆಶಂಕರ್ ಸಿನಿಮಾದಲ್ಲಿ ಮಿಥುನ್ ಚಕ್ರಬರ್ತಿ ನಟಿಸಿದ್ದು ಈ ಸಿನಿಮಾ ಭೋಜ್ಪುರಿ ಚಿತ್ರ ರಂಗ ಮರೆಯಲಾಗದ ಯಶಸ್ಸನ್ನ ತಂದುಕೊಟ್ಟಿತ್ತು. ೨೦೦೮ರಲ್ಲಿ ಬಿಡುಗಡೆಯಾದ ಇನ್ನೊಂದು ಸಿನಿಮಾ ಸಿದ್ದಾರ್ಥ್ ಸಿನ್ಹಾ ನಿರ್ಮಾಣದ ಉಧೇದ್‌ಬನ್. ಇದು ೨೧ ನಿಮಿಷಗಳ ಸಿನಿಮಾವಾಗಿದ್ದು ತನ್ನ ಕಥಾವಸ್ತು ಹಾಗೂ ಸಿದ್ದಾಂತಗಳಿಂದ ಇತರೆ ಸಿನಿಮಾಗಳಿಗಿಂತ ಪ್ರತ್ಯೇಕವಾಗಿ ನಿಲ್ಲುತ್ತದೆ. ಇದರ ವಿಶೇಷತೆಯಿಂದ ಆ ವರ್ಷ ಈ ಸಿನಿಮಾ ಬೆರ್ಲಿನ್‌ನಲ್ಲಿ ನಡೆಯುವ ಬೆರ್ಲಿನ್ ಅಂತರಾಷ್ಟ್ರೀಯ ಸಿನಿ ಉತ್ಸವದಲ್ಲಿ ವರ್ಲ್ಡ್ ಪ್ರೀಮಿಯರ್ ಖ್ಯಾತಿ ಪಡೆದುಕೊಂಡಿದ್ದು ಮಾತ್ರವಲ್ಲದೆ ಬೆಸ್ಟ್ ನ್ಯಾಶನಲ್ ಫಿಕ್ಷನ್ ಸಿನಿಮಾ ಎಂದು ರಾಷ್ಡ್ರೀಯ ಸಿನಿ ಪ್ರಶಸ್ತಿ ಪಡೆದುಕೊಂಡಿತ್ತು ಮತ್ತೂ ಅನೇಕ ಸಿನಿಮಾ ಪ್ರಶಸ್ತಿಗಳನ್ನು ಬಾಚಿಕೊಂಡಿತ್ತು. ಈ ಸಿನಿಮಾ ರಂಗದಲ್ಲಿ ಬಿಸ್ವನಾಥ್ ಪ್ರಸಾದ್ ಶಹಾಬಡಿ,ಕುಂದನ್ ಕುಮಾರ್,ಎಸ್.ಎನ್ ತ್ರಿಪಾಟಿ,ಕಲ್ಪತರು,ರಾಜ್‌ಕುಮಾರ್ ಶರ್ಮಾ,ಗೋವಿಂದ ಮೂನ್,ಮೋಹನ್ ಪ್ರಸಾದ್ ಸೇರಿದಂತೆ ಅನೇಕ ಕ್ರಿಯಾಶೀಲ ನಿರ್ದೇಶಕರು, ನಿರ್ಮಾಕರು ಕಲಾ ಸಾಧನೆಯ ಮೂಲಕ ಹೆಸರಾಗಿದ್ದಾರೆ. ಸಿನಿಮಾ ರಂಗದ ಏಳಿಗೆಗೆ ಶ್ರಮಿಸಿದ್ದಾರೆ. ರವಿಕಿಸನ್,ಮನೋಜ್ ತಿವಾರಿ, ಪವನ್ ಸಿಂಗ್, ವಿಕ್ಕಿ, ಕೃಷ್ಣ ಅಭಿಷೇಕ್, ವಿವೇಕ್ ಚೌಹಾಣ್, ಅಂತರಾ ಬಿಸ್ವಾಸ್, ಪದ್ಮಾ ಖನ್ನಾ, ನಗ್ಮಾ, ಅಚಿಜನಾ ಸಿಂಗ್ ಹೀಗೆ ಅನೇಕ ಕಲಾವಿದರು ಭೋಜ್ಪುರಿ ಸಿನಿಮಾದ ಹೆಸರಿನ ಹಿಂದೆ ಶ್ರಮಿಸಿದ್ದಾರೆ. ತಮ್ಮ ನೆಲೆ ಕಂಡಿಕೊಂಡಿದ್ದಾರೆ. --ರಾಧಿಕಾ.ಕೆ.

1 comment:

  1. ನಮಸ್ತೆ ರಾಧಿಕಾ...
    ನಿಮ್ಮ ಸಿನಿಮಾ ಪ್ರೀತಿ ಕಂಡು ತುಂಬಾ ಖುಷಿಯಾಯ್ತು. ಬರೆಹ ಅಂತಿಮವಾಗಿ ಹೇಗೇ ಇರಲಿ. ಏನೇ ಹೇಳಲಿ-ನಿಮ್ಮ ಆಸಕ್ತಿ ನನ್ನ ಗಮನಸೆಳೆಯಿತು. ನನಗೂ ಸಿನಿಮಾ ಕಾವ್ಯದಂತೆ ಕಾಡುವುದುಂಟು. ಮತ್ತೆ ಮತ್ತೆ ಬರೆಯುವಂತೆ ಮಾಡುವುದುಂಟು. ಆದ್ರೆ ಸಿನಿಮಾ ಬಗ್ಗೆ ನಾ ಸದ್ಯದ ಮಾಧ್ಯಮಗಳ ಥರದ ಜನಪ್ರಿಯ ಧಾಟಿಯಲ್ಲಿ ಬರೆಯಲಾರೆ. ಇಷ್ಟವೂ ಇಲ್ಲ ನನಗದು. ನಿಮ್ಮ ಪರಿಚಯ ಮಾಡಿಕೊಳ್ಳುವ ಆಸೆ ನನ್ನದು-ನಿಮ್ಮದೇನೂ ಅಭ್ಯಂತರ ಇಲ್ಲದಿದ್ದರೆ...?

    ನನಗೆ ನಮ್ಮ ಪ್ರೊಫೆಸರ್ ಮತ್ತು ಡಾ.ಕೆ.ಪುಟ್ಟಸ್ವಾಮಿ ಇವರಿಬ್ರನ್ನು ಬಿಟ್ಟು ಮತ್ಯಾರೊಂದಿಗೂ ಸಿನಿಮಾ ಬಗ್ಗೆ ಮಾತನಾಡಬೇಕು ಅನ್ನಿಸಿಲ್ಲ ಇದುವರೆಗೂ. ಅಂತಹ ಗಂಭೀರ ಆಸಕ್ತಿ ಇರುವವರು ಯಾರೂ ಸಿಕ್ಕಿರಲಿಲ್ಲ ನನಗೆ...ಈಗ ನೀವು ಸಿಕ್ಕಿದ್ದೀರಿ..ಖುಷಿಯಾಯ್ತು. ಸಿಕ್ಕಿ ಒಮ್ಮೆ ಮಾತನಾಡುವಾ ಜಗತ್ತನ್ನು ಮರೆತು-ಸಿನಿಮಾದ ಬಗ್ಗೆ..ಸಿನಿಮಾ ಅನ್ನೋ ಕ್ಯಾಮೆರಾ ಕವಿತೆಗಳ ಬಗ್ಗೆ...ಒಬ್ಬನೇ ಬಡಬಡಿಸಿದ್ದು ಸಾಕು. ಇನ್ನು ನೀವು ಮಾತನಾಡಿ, ಕಾಯ್ತಿರ್ತೇನೆ ನಿಮ್ಮ ಮಾತಿಗಾಗಿ..

    -ಸಹ್ಯಾದ್ರಿ ನಾಗರಾಜ್(ವಿಜಯ ಕರ್ನಾಟಕ)
    sahyadri.nagaraj@gmail.com (8722631300 / 9164163181)

    ReplyDelete