Thursday 21 March 2013

ನಕ್ಕು ನಗಿಸುವ ಹಾಸ್ಯದಲ್ಲು ನೂರು ಬಗೆ..!

ಸಾಂಸಾರಿಕ,ಭೂಗತ,ಭಯಾನಕ ಸಿನಿಮಾಗಳಂತೆ ಹಾಸ್ಯ ಪ್ರಧಾನ ಸಿನಿಮಾಗಳೂ ಕೂಡ ಒಂದು ವಿಧವಾಗಿದೆ. ಹಾಸ್ಯ ಪ್ರಧಾನ ಸಿನಿಮಾ ಹೆಸರೇ ಹೇಳುವಂತೆ ಹಾಸ್ಯ ರಸವೇ ಪ್ರಧಾನ ವಸ್ತುವಾಗಿ ಹೊಂದಿರುವಂತಾದ್ದು. ಸಿನಿಮಾ ನೋಡಿ ಪ್ರೇಕ್ಷಕ ತನ್ನ ಎಲ್ಲಾ ಒತ್ತಡಗಳನ್ನು ಬದಿಗಿಟ್ಟು ನಕ್ಕು ಮನ ಹಗುರಾಗಿಸಿಕೊಂಡರೆ ನಿರ್ದೇಶಕ ಸೇರಿದಂತೆ ಸಿನಿಮಾ ತಂಡ ತಮ್ಮ ಪ್ರಯತ್ನದಲ್ಲಿ ಯಶಸ್ವಿ ಗಳಿಸಿದರೆಂದೇ ಹೇಳಬಹುದು. ಈ ಹಾಸ್ಯಗಳು ಸಾಮಾನ್ಯವಾಗಿ ಆರೋಗ್ಯಯುಕ್ತವಾಗಿದ್ದು ಪ್ರೇಕ್ಷಕನ ಮನೋರಂಜನೆಗಾಗೇ ತಯಾರಾಗುವಂತಾದ್ದು. ಈ ಹಾಸ್ಯಗಳು ಸಾಮಾನ್ಯ ಜನ ಜೀವನದ ಘಟನೆಗಳನ್ನು ಆಧಾರವಾಗಿರಿಸಿಕೊಂಡೇ ರಚಿತವಾಗುವಂತಾದ್ದು. ಸಾಮಾನ್ಯ ಜೀವನದ ಕೆಲವೊಂದು ಘಟನೆಗಳನ್ನು, ಜನರ ಮಾತಿನ ರೀತಿಗಳನ್ನು,ಭಾಷೆಗಳನ್ನು ಅಥವಾ ಇನ್ಯಾವುದೋ ಒಂದು ಸಂದರ್ಭವನ್ನು ಅತಿಶಯೋಕ್ತಿಯಿಂದ ಹಾಸ್ಯಮಯವಾಗಿ ಬಿಂಬಿಸುವುದು ಈ ಸಿನಿಮಾದ ಮುಖ್ಯ ಅಂಶ. ಜಗತ್ತಿನಲ್ಲಿ ಅನೇಕ ಸಿನಿಮಾಗಳು ಹಾಸ್ಯ ಪ್ರಧಾನವಾಗಿ ಮೂಡಿ ಬಂದಿವೆ. ಸಾಮಾನ್ಯವಾಗಿ ಈ ರೀತಿಯ ಸಿನಿಮಾಗಳು ಸುಖಾಂತ್ಯವನ್ನೊಳಗೊಂಡಿರುತ್ತವೆ. ಇದಕ್ಕೆ ಹೊರತಾದ ಕೆಲವೊಂದು ಸಿನಿಮಾಗಳನ್ನೂ ಸಹ ನಾವು ಕಾಣಬಹುದು. ಹಾಸ್ಯ ಸಿನಿಮಾ ರಂಗದ ಅತೀ ಹಳೆಯದಾದ ಪ್ರಧಾನ ವಸ್ತು. ಸಿನಿಮಾ ರಂಗದ ಮೊದಲಲ್ಲಿ ತೆರೆ ಕಾಣುತ್ತಿದ್ದ ಮೂಖಿ ಚಿತ್ರಗಳಲ್ಲಿ ಬಹುಮುಖ್ಯವಾಗಿ ಕಂಡುಬರುತ್ತಿದ್ದ ಅಂಶಗಳೆಂದರೆ ಈ ಹಾಸ್ಯಗಳು. ಹಾಸ್ಯ ಸಿನಿಮಾಗಳು ಇತರೆ ಸಿನಿಮಾಗಳಂತಲ್ಲ. ಇಲ್ಲಿ ನಿರ್ದೇಶಕ ಅತೀ ಸೂಕ್ಷ್ಮ ಮನಸ್ಸು ಉಳ್ಳವನಾಗಿರಬೇಕು. ಆತ ಜಗತ್ತನ್ನು ಹಾಸ್ಯದ ವಸ್ತುವಾಗಿ ಕಾಣಬೇಕು. ಜನಜೀವನದ ಜಂಜಾಟಗಳಿಂದ ಆತ ಪ್ರೇರಣೆ ಪಡೆಯಬೇಕು. ಮೊದಲು ಬಂದಂತಹ ಮೂಕಿ ಸಿನಿಮಾಗಳಲ್ಲಿ ಬಹುಮುಖ್ಯವಾಗಿ ಕಂಡುಬರುತ್ತಿದ್ದುದು ಈ ಹಾಸ್ಯದ ಪ್ರಧಾನ ಅಂಶಗಳು. ಶಬ್ದ, ಮಾತಿಗಿಂತ ಹೆಚ್ಚಾಗಿ ವ್ಯಕ್ತಿಯ ಹಾವ ಬಾವಗಳು, ಅಭಿವ್ಯಕ್ತಿಗಳ ಮೂಲಕ ಜನರನ್ನು ನಗಿಸುವ ಕಾರ್ಯಗಳನ್ನು ಈ ಸಿನಿಮಾಗಳು ಮಾಡುತ್ತಿದ್ದವು. ಹಾಸ್ಯಗಳಲ್ಲಿ ಅನೇಕ ವಿಧಗಳಿವೆ. ಅವುಗಳ ಪ್ರಸ್ತುತತೆ, ವಸ್ತು ವಿಷಯಗಳ ಆಧಾರದ ಮೇಲೆ ಹಾಸ್ಯ ಸಿನಿಮಾಗಳನ್ನು ವಿಂಗಡಿಸಬಹುದು. ಭಾವಾತಿರೇಕ ಹಾಸ್ಯ, ಸಂದಿಗ್ಧತೆಯ ಹಾಸ್ಯ, ಕರಾಳ ಹಾಸ್ಯ, ಪ್ರಣಯಭರಿತ ಹಾಸ್ಯ ಹೀಗೆ ಹಾಸ್ಯಕ್ಕೆ ನೂರು ವಿಧಗಳು. ಆಂಗ್ಲ ಸಿನಿಮಾ ವಿಮರ್ಶಕರು ಹಾಸ್ಯವನ್ನು ಒಂದು ನಿರ್ದಿಷ್ಟ ರಿತಿಯಲ್ಲಿ ವಿಂಗಡಿಸಿ ಅದಕ್ಕೊಂದು ರೂಪು ಆಯಾಮಗಳನ್ನ ನೀಡಿದ್ದಾರೆ. ಸಾಹಸಭರಿತ ಹಾಸ್ಯ: ಇದೊಂದು ವಿಶಿಷ್ಟವಾದ ಹಾಸ್ಯ ಪ್ರಧಾನ ಸಿನಿಮಾ. ಇಲ್ಲಿ ಹಾಸ್ಯದಷ್ಟೇ ಸಾಹಸವೂ ಬಹುಮುಖ್ಯವಾದುದು. ಒಂದು ರೀತಿಯಲ್ಲಿ ಇದು ಸಾಹಸ ಚಿತ್ರಕ್ಕೆ ಹಾಸ್ಯದ ಲೇಪನವಾಗಿದೆ. ಇದಕ್ಕೆ ಒಳ್ಳೆಯ ಉದಾಹರಣೆ ಜಾಕೀ ಚಾನ್‌ರವರ ಮಾರ್ಷಲ್ ಆರ್ಟ್ಸ ಸಾಹಸವನ್ನೊಳಗೊಂಡ ಹಾಂಗ್ ಕಾಂಗ್ ಆಕ್ಷನ್ ಸಿನಿಮಾಗಳು. ಭಯಾನಕ ಹಾಸ್ಯ ಸಿನಿಮಾ: ಹೆಸರೆ ಹೇಳುವಂತೆ ಸಿನಿಮಾದಲ್ಲಿ ಭಯಾನಕ ರಸ ಹಾಗೂ ಹಾಸ್ಯ ರಸ ಹೀಗೆ ಎರಡರ ಮಿಶ್ರಣವನ್ನು ಕಾಣಬಹುದು.ಈ ರೀತಿಯ ಸಿನಿಮಾದಲ್ಲಿ ಭಯಾನಕ ವಸ್ತು ಕಥಾವಸ್ತುವಾಗಿದ್ದು ಅದಕ್ಕೆ ಹಾಸ್ಯದ ಲೇಪನ ನೀಡುತ್ತಾರೆ. ಉದಾಹರಣೆಗೆ ಲಿಟಲ್ ಶಾಪ್ ಆಫ್ ಹಾರರ್, ಸ್ಕ್ರೀಮ್ ಹಾಗು ಮಾನ್ಶನ್‌ನಂತಹ ಸಿನಿಮಾಗಳು ಉದಾಹರಣೆಗಳಾಗಿವೆ. ಕಾಲ್ಪನಿಕ ಹಾಸ್ಯ ಸಿನಿಮಾ: ಕಾಲ್ಪನಿಕ ಹಾಸ್ಯ ಸಿನಿಮಾಗಳು ವಿಶಿಷ್ಟವಾದ ಹಾಸ್ಯ ಸಿನಿಮಾಗಳಾಗಿದ್ದು ಇಲ್ಲಿ ಜಾದೂ,ಅಲೌಕಿಕ ಹಾಗೂ ದಂತಕಥೆಗಳ ವ್ಯಕ್ತಿಗಳನ್ನು ಸಿನಿಮಾದ ಹಾಸ್ಯ ಪಾತ್ರಗಳನ್ನಾಗಿಸುವುದು ಇದರ ಉದ್ದೇಶ. ಬಿಯಿಂಗ್ ಜಾನ್ ಮಲ್ಖೋವಿಖ್, ದಿ ಪ್ರಿನ್ಸೆಸ್ ಬ್ರೈಡ್‌ನೈಟ್ ಎಟ್ ಮ್ಯೂಸಿಯಮ್ ಮುಂತಾದುವು. ಕರಾಳ ಹಾಸ್ಯ: ಇಲ್ಲಿ ಹಾಸ್ಯದ ದಾಳ ಕ್ರೌರ್ಯ. ಅಂದರೆ ಸಿನಿಮಾದಲ್ಲಿ ಕೌರ್ಯವನ್ನು ಹಾಸ್ಯದ ಮೂಲವಾಗಿ ಬಿಂಬಿಸುತ್ತಾರೆ. ದಿ ಕೇಬಲ್ ಗೈ, ರೂಥ್ಲೆಸ್ ಪೀಪಲ್ ಮುಂತಾದು ಇದಕ್ಕೆ ಉದಾಹರಣೆಯಾಗಿವೆ. ಸೈಫೈ ಹಾಸ್ಯ ಸಿನಿಮಾಗಳು ಅಥವಾ ಕಲ್ಪನಾತೀತ ವೈಜ್ಞಾನಿಕ ಸಿನಿಮಾಗಳು: ಹೆಸರೇ ಹೇಳುವಂತೆ ವೈಜ್ಞಾನಿಕವಾಗಿ ಸಾದ್ಯವಾಗದಂತಹ ಆದರೂ ವೈಜ್ಞಾನಿಕವಾಗಿ ಬಿಂಬಿಸುವ ಕಾಲ್ಪನಿಕ ಸಿನಿಮಾಗಳು ಹಾಸ್ಯ ಪ್ರಧಾನವಾಗಿ ಮೂಡಿ ಬರುತ್ತದೆ. ಬ್ಯಾಕ್ ಟು ದಿ ಫ್ಯೂಚರ್, ಇವೊಲ್ಯೂಶನ್, ಇನ್ನರಸ್ಪೇಸ್, ಮಾಸ್ ಅಟ್ಯಾಕ್ ಮುಂತಾದುವು ಇದಕ್ಕೆ ಉತ್ತಮ ಉದಾಹರಣೆಯಾಗಿ ನಿಂತಿವೆ. ಮಿಲಿಟರಿ ಹಾಸ್ಯ: ಮಿಲಿಟರಿ ಹಾಸ್ಯ ಸಿನಿಮಾಗಳು ಸೈನಿಕರ ಜೀವನ ರೀತಿಗಳಲ್ಲಿ ಕಂಡು ಬರುವಂತಹ ಶಿಸ್ತು, ಸಮಯಪಾಲನೆಗಳನ್ನು ಹಾಸ್ಯದ ವಸ್ತುವಾಗಿಸಿಕೊಳ್ಳುತ್ತವೆ. ಹೀಗೆ ಹಾಸ್ಯ ಸಿನಿಮಾಗಳಲ್ಲಿ ನಾವು ಅನೇಕ ವಿಧಗಳನ್ನು ಕಾಣಬಹುದು. ಸಾಮಾಜಿಕ ಬದುಕಿನ ಎರುಪೇರುಗಳು, ನೈಜ ವ್ಯಂಗ್ಯ ಸನ್ನಿವೇಶಗಳು, ವಾಸ್ತವ ಜಗತ್ತು ಸಿನಿಮಾದ ಮೂಲ ಕಥಾವಸ್ತುಗಳಾಗಿ ಹಾಸ್ಯದ ದಾಳಗಳಾಗಬಹುದು. ಏನೇ ಆಗಲಿ ಜನರನ್ನು ನಕ್ಕು ನಗಿಸುವ ಶಕ್ತಿ ಕಥಾವಸ್ತುವಿಗಿದ್ದರೆ ಅದು ಒಂದು ಉತ್ತಮ ಹಾಸ್ಯ ಸಿನಿಮಾವಾಗಬಹುದು.

No comments:

Post a Comment